ಕೊಲ್ಯ :- ಪರಿಸರ ಸಂರಕ್ಷಣೆಯ ಕುರಿತ ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿ ಗಿಡಗಳನ್ನು ನೆಟ್ಟು ನೀರೆರೆದು ಪೋಷಿಸುವ ದೃಢ ಸಂಕಲ್ಪದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಯುವವಾಹಿನಿ ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಕು.ಭಾರತಿ ಸನಿಲ್ ರವರ ಮನಸ್ಸಿಗೆ ಮೂಡಿಬಂದ ಪರಿಕಲ್ಪನೆಯೆ ಪರಿಸರ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವುದು. ಈ ಪರಿಕಲ್ಪನೆ ಸಾಕಾರಗೊಳ್ಳಲು ಸೂಕ್ತವಾದ ವೇದಿಕೆ ಒದಗಿ ಬಂದದ್ದು ದಿನಾಂಕ 10 ಸೆಪ್ಟೆಂಬರ್ 2022 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜನ್ಮದಿನಾಚರಣೆಯ ಪುಣ್ಯದಿನದಂದು,ಈ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಇದರ ಹೊರಾಂಗಣದಲ್ಲಿ ನಡೆಯಿತು.
ವೃಕ್ಷಗಳಿಗೂ ಚೈತನ್ಯವಿದೆ, ಪರಿಸರವನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸುತ್ತದೆ ಎನ್ನುವ ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶದಂತೆ, ಮುಂದಿನ ದಿನಗಳಲ್ಲಿ ಬೆಳೆದು ಹೆಮ್ಮರವಾಗಿ ಪರಿಸರದ ಸಮತೋಲನವನ್ನು ಕಾಪಾಡುವ ಕೆಲವೊಂದು ಗಿಡಗಳನ್ನು, ಸ್ಥಳೀಯ ಹೆಸರಾಂತ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ರವರ ಅಮೃತಹಸ್ತದಿಂದ, ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರ ಕೊಲ್ಯದ ಹೊರಾಂಗಣದಲ್ಲಿ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ರಿ ಕೊಲ್ಯ ಸೋಮೇಶ್ವರ ಇದರ ಗೌರವಾಧ್ಯಕ್ಷರು ಗೋಪಾಲಕೃಷ್ಣ ಸೋಮೇಶ್ವರ, ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾದ ವೇಣುಗೋಪಾಲ್ ಕೊಲ್ಯ, ಬಿಲ್ಲವ ಸೇವಾ ಸಮಾಜ ಕೊಲ್ಯ ಇದರ ಅಧ್ಯಕ್ಷರಾದ ಜಯರಾಮ ಪಿಲಿಕೂರು, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಮಂಡಳಿ ಕೊಲ್ಯ ಇದರ ಅಧ್ಯಕ್ಷರಾದ ಕುಸುಮ ಭರತ್ ಮತ್ತು ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷರಾದ ಸುಂದರ್ ಸುವರ್ಣ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ನೆಡಲಾಯಿತು. ಈ ರಾಷ್ಟ್ರ ಕಂಡ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆಯ ದಿನದಂದೆ, ಅವರ ತತ್ವಗಳಿಗೆ ಪೂರಕವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮದ ಆಯೋಜನೆಗೆ ಸಂತಸ ವ್ಯಕ್ತಪಡಿಸಿದ ವೃಕ್ಷಪ್ರೇಮಿ ಮಾಧವ ಉಳ್ಳಾಲ್, ಯುವವಾಹಿನಿ ಕೊಲ್ಯ ಘಟಕದ ಪರಿಸರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷರಾದ ಸುಂದರ್ ಸುವರ್ಣರವರು, ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆಯನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಅಭಿಲಾಷೆಯಾಗಿತ್ತು. ಇಂದು ಆ ಸುದಿನ ಒದಗಿ ಬಂದಿದೆ. ನಾರಾಯಣ ಗುರುಗಳ ಸಂದೇಶದಂತೆ ಗಿಡಗಳನ್ನು ನೆಟ್ಟು, ಮುಂದಿನ ದಿನಗಳಲ್ಲಿ ಆ ಗಿಡಗಳು ಬೆಳೆದು ದೃಢವಾಗಿ ನಿಲ್ಲುವವರೆಗೂ ಅದರ ಪಾಲನೆ ಪೋಷಣೆ ನಮ್ಮೆಲ್ಲರ ಜವಾಬ್ದಾರಿಯೆಂದು ಭರವಸೆ ವ್ಯಕ್ತಪಡಿಸಿದರು. ಯುವವಾಹಿನಿ ಕೊಲ್ಯ ಘಟಕದ ಆಶ್ರಯದಲ್ಲಿ ಜರುಗಿದ ಗಿಡ ನೆಡುವ ಕಾರ್ಯಕ್ರಮಕ್ಕೆ, ಬಿಲ್ಲವ ಸೇವಾ ಸಮಾಜ ಟ್ರಸ್ಟ್ ರಿ ಕೊಲ್ಯ ಸೋಮೇಶ್ವರ, ಬಿಲ್ಲವ ಸೇವಾ ಸಮಾಜ ರಿ ಕೊಲ್ಯ ಸೋಮೇಶ್ವರ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯದ ಅಧ್ಯಕ್ಷರು ಗೌರವಾಧ್ಯಕ್ಷರು ಹಾಗೂ ಸರ್ವಸದಸ್ಯರು ಸಹಕಾರ ನೀಡಿದರು. ಯುವವಾಹಿನಿ ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಕು.ಭಾರತಿ ಸನಿಲ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ನಿತಿನ್ ಕರ್ಕೆರ ಧನ್ಯವಾದ ಸಮರ್ಪಿಸಿದರು.