ಬೆಂಗಳೂರು : ಫೆಬ್ರವರಿ 13, 2022ರ ಭಾನುವಾರ ಬೆಂಗಳೂರಿನ ಜಯನಗರದ ಯುವಕ ಸಂಘದ ವಿವೇಕ ಸಭಾಂಗಣದಲ್ಲಿ ಸಂಭ್ರಮವೋ ಸಂಭ್ರಮ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೂಲೆಗಳಿಂದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು ಸೇರಿರುವ ಬಿಲ್ಲವ ಸಮಾಜದ ಯುವಕ-ಯುವತಿಯರು ಯುವವಾಹಿನಿ (ರಿ) ಬೆಂಗಳೂರು ಘಟಕದ ನಾಲ್ಕನೆಯ ವಾರ್ಷಿಕ ಸಮಾವೇಶವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಬೆಳಿಗ್ಗೆ ಗಂಟೆ ಹತ್ತರಿಂದ ಆರಂಭವಾದ ಕಾರ್ಯಕ್ರಮವನ್ನು ಸಕೇಶ್ ಬುನ್ನನ್ ನಡೆಸಿಕೊಟ್ಟರು. ವಿವಿಧ ನೃತ್ಯ-ಸಂಗೀತ ಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸೇರಿದ್ದ ಜನಸಾಗರವು ಮನರಂಜನೆಯ ರಸದೌತಣವನ್ನು ಸವಿಯುವಂತಾಯಿತು. ಸುಮಾರು 11: 30ಕ್ಕೆ ಆರಂಭವಾದ ಪದಗ್ರಹಣ ಸಮಾರಂಭವನ್ನು ಪ್ರಸಾದ್ ಕುಮಾರ್ ಮತ್ತು ಭಾವನ ಇವರು ನಿರೂಪಿಸಿದರು.
ಕಾರ್ಯಕ್ರಮದ ಉದ್ಘಾಟಕರಾದ ಡಾ. ಗೋವಿಂದ ಬಾಬು ಪೂಜಾರಿಯವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯದರ್ಶಿಯಾದ ಶಶಿಧರ್ ಕೋಟ್ಯಾನ್ ಇವರು ಯುವವಾಹಿನಿ ಬೆಂಗಳೂರು ಘಟಕವು 2020-21ರ ಸಾಲಿನಲ್ಲಿ ಮಾಡಿದ ಕಾರ್ಯಕ್ರಮಗಳ ವಾರ್ಷಿಕ ವರದಿಯನ್ನು ವಿಡಿಯೋ ಮುಖಾಂತರ ಪ್ರದರ್ಶಿಸಿದರು. ಶ್ರೀ ನಾರಾಯಣ ಗುರು ತತ್ವ ಪ್ರಚಾರ, ವಿದ್ಯೆ, ಉದ್ಯೋಗ, ಸಂಪರ್ಕ, ಸೇವಾ ಸಂಜೀವಿನಿ ಮತ್ತಿತರ ಯೋಜನೆಗಳ ಮೂಲಕ ಬೆಂಗಳೂರು ಘಟಕದ ಸದಸ್ಯರು ನಡೆಸಿದ ಸೇವಾ ಕೈಂಕರ್ಯಗಳು ಅತಿಥಿಗಳ ಹುಬ್ಬೇರಿಸುವಂತೆ ಮಾಡಿತು.
ಯುವವಾಹಿನಿ ಬೆಂಗಳೂರು ಘಟಕದ ಪೋಷಕರಾದ ಡಾ.ಗೋವಿಂದ ಬಾಬು ಪೂಜಾರಿ ಅವರನ್ನು ಅವರ ನಿರಂತರ ಸಹಕಾರಕ್ಕೆ ಅಭಿನಂದಿಸಲಾಯಿತು. ಆ ಬಳಿಕ ಮಾತನಾಡಿದ ಡಾ. ಗೋವಿಂದ ಬಾಬು ಪೂಜಾರಿ ಅವರು ಯುವವಾಹಿನಿಯ ಜೊತೆಗೂಡಿ ಇನ್ನೂ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದುವರಿಸುವುದಾಗಿ ಹೇಳಿದರು. ಬೆಂಗಳೂರು ಘಟಕದ ಸದಸ್ಯರನ್ನು ಆಶೀರ್ವದಿಸಲು ಮಂಗಳೂರಿನಿಂದ ಆಗಮಿಸಿದ ಯುವವಾಹಿನಿ (ರಿ) ಕೇಂದ್ರ ಸಮಿತಿಯ 12 ಮಾಜಿ ಅಧ್ಯಕ್ಷರುಗಳನ್ನು ವಿಶೇಷವಾಗಿ ಅಭಿನಂದಿಸಿ ಅವರ ಆಶೀರ್ವಾದ ಪಡೆಯಲಾಯಿತು. ಯುವವಾಹಿನಿ ಬೆಂಗಳೂರು ಘಟಕದ ಪರವಾಗಿ ಕಳೆದ ವರ್ಷಪೂರ್ತಿ ಬ್ರಹ್ಮಶ್ರೀ ನಾರಾಯಣ ಗುರು ತತ್ವ ಪ್ರಚಾರದ ಬಗ್ಗೆ ಗ್ರಹ ಭಜನೆ ಮತ್ತು ಗುರು ಸಂದೇಶದ ಮೂಲಕ ವಿಶೇಷ ಕಾರ್ಯನಿರ್ವಹಿಸಿದ ಜಯಂತ್ ಸಾಲ್ಯಾನ್ ಮತ್ತು ಅವಿನಾಶ್ ಇವರನ್ನು ಸನ್ಮಾನಿಸಲಾಯಿತು. ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರು, ಬಿಲ್ಲವ ಸಮಾಜದ ಫೈರ್ ಬ್ರಾಂಡ್, ಸತ್ಯಜಿತ್ ಸುರತ್ಕಲ್ ಇವರು ಮಾತನಾಡಿ ಶ್ರೀ ನಾರಾಯಣ ಗುರುಗಳ ತತ್ವ ಪರಿಪಾಲಿಸುವ 26 ವಿವಿಧ ಪಂಗಡಗಳನ್ನು ರಾಜ್ಯಾದ್ಯಂತ ಒಗ್ಗಟ್ಟಾಗಿಸುವ ಕೆಲಸವಾಗಬೇಕಾಗಿದೆ. ಶ್ರೀ ನಾರಾಯಣಗುರು ನಿಗಮಕ್ಕಾಗಿ ಬಹಳಷ್ಟು ವರ್ಷಗಳಿಂದ ಶ್ರಮಿಸುತ್ತಿದ್ದರೂ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದರು.
ಬಳಿಕ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಸುಪ್ರೀತಾ ಪೂಜಾರಿ ಹಾಗೂ ಕಲೆ ಮತ್ತು ಸಿನಿಮಾರಂಗದಲ್ಲಿ ಹೆಸರುವಾಸಿಯಾದ ರಾಕೇಶ್ ಕುಮಾರ್ ಹೂಡೆ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಶ್ರೀ ಆರ್ಯ ಈಡಿಗ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಆಟೋ ಗಂಗಾಧರ್ ಅವರು ಮಾತನಾಡಿ ಸಮಾಜದ ಒಗ್ಗಟ್ಟು ಮತ್ತು ಏಳಿಗೆಗಾಗಿ ಯುವವಾಹಿನಿ ಜೊತೆಗೂಡಿ ಮುಂದೆ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದಾಗಿ ಹೇಳಿದರು. ಬಳಿಕ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹಾಗೂ ಬೆಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷರು ಮತ್ತು ಚುನಾವಣಾಧಿಕಾರಿಯಾದ ಕಿಶನ್ ಪೂಜಾರಿಯವರು 2022ರ ಸಾಲಿನ ಯುವವಾಹಿನಿ ಬೆಂಗಳೂರು ಘಟಕದ ಹೊಸ ಪದಾಧಿಕಾರಿಗಳ ಹೆಸರುಗಳನ್ನು ಸೂಚಿಸಿ ಅವರನ್ನು ಸಭೆಗೆ ಕರೆದು ಅಭಿನಂದಿಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಅವರು ನೂತನ ಪದಾಧಿಕಾರಿಗಳಿಗೆ ಪದಪ್ರಧಾನವನ್ನು ನೆರವೇರಿಸಿಕೊಟ್ಟರು.
ಬೆಂಗಳೂರು ಘಟಕದ ನೂತನ ಅಧ್ಯಕ್ಷರಾದ ಶ್ರೀಧರ್ ಡಿ ಇವರು ಅಧಿಕಾರ ಸ್ವೀಕಾರದ ಮಾತನಾಡಿ ಈ ವರ್ಷ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಗಳನ್ನು ನಡೆಸುವತ್ತ ಯುವವಾಹಿನಿ ಬೆಂಗಳೂರು ಘಟಕವನ್ನು ಮುನ್ನಡೆಸುವುದಾಗಿ ಹೇಳಿದರು. ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಡಾಕ್ಟರ್ ರಾಜಾರಾಮ್ ಕೆ. ಬಿ. ಇವರನ್ನು ಬೆಂಗಳೂರು ಘಟಕದ ಪರವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರಧಾನ ಭಾಷಣವನ್ನು ಮಾಡಿದ ಡಾ. ರಾಜಾರಾಮ್ ಇವರು ಯುವ ಸಮುದಾಯಕ್ಕೆ ಮಾರ್ಗದರ್ಶನದ ಮಾತುಗಳನ್ನಾಡಿದರು.
ಪದಪ್ರಧಾನ ಮಾಡಿದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಅವರು ಮಾತನಾಡಿ ಬೆಂಗಳೂರು ಘಟಕದ ಕಾರ್ಯವೈಖರಿಗಳನ್ನು ಶ್ಲಾಘಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಅಧ್ಯಕ್ಷತೆಯ ಭಾಷಣವನ್ನು ಮಾಡಿದ ರಾಘವೇಂದ್ರ ಪೂಜಾರಿಯವರು ವರ್ಷಪೂರ್ತಿ ತಮ್ಮ ಜೊತೆ ದುಡಿದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿ, ಅವರೆಲ್ಲರಿಗೂ ವಿಶುಕುಮಾರ್ ವಿರಚಿತ ಪುಸ್ತಕವೊಂದನ್ನು ನೀಡುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಲಾಯಿತು. ಅಧ್ಯಕ್ಷರಾದ ರಾಘವೇಂದ್ರ ಪೂಜಾರಿ ಮತ್ತು ಕಾರ್ಯದರ್ಶಿ ಶಶಿಧರ್ ಕೋಟ್ಯಾನ್ ಅವರನ್ನು ಹಾಗೂ ನಿಕಟಪೂರ್ವ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಮತ್ತು ಬೆಂಗಳೂರು ಘಟಕದ ಸ್ಥಾಪಕ ಅಧ್ಯಕ್ಷರಾದ ಸುಧೀರ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ವಿವಿಧ ಘಟಕಗಳ ಅಧ್ಯಕ್ಷರುಗಳು ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳು ಶ್ರೀಧರ್ ಡಿ. ನಾಯಕತ್ವದ ನೂತನ ತಂಡಕ್ಕೆ ಶುಭ ಹಾರೈಸಿದರು. ಆಗಮಿಸಿದ ಅತಿಥಿಗಳಿಗೆ ಎಲ್ಲರಿಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ನಿಯೋಜಿತ ಕಾರ್ಯದರ್ಶಿಯಾದ ವಿಜೇತ್ ಪೂಜಾರಿಯವರು ಧನ್ಯವಾದವನ್ನು ಸಮರ್ಪಿಸಿದರು.
ಸಂಘಟಿತ ಪ್ರಯತ್ನದ ಸಾಕಾರ ಈ ಸಮಾರಂಭ. ಅಭಿನಂದನೆಗಳು ಎಲ್ಲರಿಗೂ