ಉಡುಪಿ: ಯುವವಾಹಿನಿ(ರಿ.) ಉಡುಪಿ ಘಟಕದ ಸಭಾಂಗಣದಲ್ಲಿ ದಿನಾಂಕ 14-04-2024ರ ಭಾನುವಾರ ಸಂಜೆ 3.30ಕ್ಕೆ ಯುಗಾದಿ ಹಬ್ಬದ ಆಚರಣೆ, ಬಿಸು ಕಣಿ ಬಗ್ಗೆ ಮಾಹಿತಿ, ಮಹಿಳೆಯರಿಗಾಗಿ ಕಾರ್ಯಕ್ರಮ, ತುಳಿಲಿಪಿ ಪರೀಕ್ಷೆ ಬರೆದವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಮಾಣ ಪತ್ರ, ಗುರುವಂದನೆ ಇತ್ಯಾದಿ ಕಾರ್ಯಕ್ರಮಗಳು ನಡೆದವು.
ನಾರಾಯಣ ಗುರುವರ್ಯರ ಭಾವಚಿತ್ರದ ಮುಂದೆ ಬಿಸು ಕಣಿಯನಿಟ್ಟು ದೀಪ ಹಚ್ಚಿ ಕೈಮುಗಿದು ಕಾರ್ಯಕ್ರಮ ಆರಂಭವಾಯಿತು. ಬಂದ ಸದಸ್ಯರಿಗೆಲ್ಲ ವಿವಿಧ ಆಟಗಳನ್ನು ಆಡಿಸಲಾಯಿತು. ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟವರು ಘಟಕದ ಮಾಜಿ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್ ರವರು. ಮಕ್ಕಳ ಆಟ ಆಡುತ್ತಾ ಆಡುತ್ತಾ ಘಟಕದ ಸದಸ್ಯರು ಮಕ್ಕಳೇ ಆಗಿ ಹೋದರು. ಯುಗಾದಿಯ ಪಾಯಸದ ಸವಿಯನ್ನು ಮೆಲ್ಲುತ್ತಾ ನಿರರ್ಗಳ ವಾಗ್ಝರಿಯ ಅದ್ಭುತ ನಿರೂಪಕ, ಪ್ರಸ್ತುತ ಉಡುಪಿ ದಕ್ಷಿಣ ಕನ್ನಡದಲ್ಲಿ ಹೆಸರು ಮಾಡಿರುವ ಘಟಕದ ಸದಸ್ಯ ಶ್ರೀ ಸಚೇಂದ್ರ ಮುಂಬಾಗಿಲು ಅವರಿಂದ ಬಿಸುವಿನ ಬಗ್ಗೆ ತಿಳಿದುಕೊಂಡರು.
ಮಹಿಳೆ ಸಬಲೆ ಎಂಬ ವಿಚಾರದ ಕುರಿತು ಪುರುಷರು ಮಹಿಳೆಯರು ಎಲ್ಲರೂ ಸೇರಿ ಆರೋಗ್ಯಕರವಾದ ಸಂವಾದವನ್ನು ನಡೆಸಿಕೊಟ್ಟರು. ತುಳು ನಾಡಿನ ಹೆಣ್ಣು ಮಗಳು ಗಟ್ಟಿಗಿತ್ತಿ ಎನ್ನುವುದನ್ನು ತನ್ನ ಮಾತುಗಳಿಂದ ಬಹಳ ಸುಂದರವಾಗಿ ಕಟ್ಟಿಕೊಟ್ಟವರು ಸಚೇಂದ್ರ ಅಂಬಾಗಿಲು ಅವರು. ಜೈ ತುಳುನಾಡು ಇದರ ಸಹಯೋಗದೊಂದಿಗೆ ತುಳು ಲಿಪಿ ಕಲಿಕಾ ತರಬೇತಿ ಶಿಬಿರವನ್ನು ನಡೆಸಿದ ಬಳಿಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಮಾಣ ಪತ್ರವನ್ನು ಹಂಚಲಾಯಿತು. ಬಳಿಕ ಗುರುಗಳಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು. ಗುರುಗಳು ಸಂಪೂರ್ಣ ಉಚಿತವಾಗಿ ತರಗತಿಗಳನ್ನು ನಡೆಸಿಕೊಟ್ಟಿದ್ದರು.
ಈ ಕಾರ್ಯಕ್ರಮದ ಸಂಚಾಲಕತ್ವವನ್ನು ಘಟಕದ ಮಹಿಳಾ ಸಂಚಾಲಕಿ ಲಕ್ಷ್ಮಿ ಅವರು ವಹಿಸಿಕೊಂಡಿದ್ದರು. ಅಧ್ಯಕ್ಷರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.