ಯುವವಾಹಿನಿ (ರಿ) ಬಜ್ಪೆ ಘಟಕದ ಆಶ್ರಯದಲ್ಲಿ ತುಡಾರ ಪರ್ಬ

ಬಲಿರಾಜ ಕೃಷಿ ಕ್ಷೇತ್ರದ ಯಜಮಾನ – ಡಾ|| ದೇಜಪ್ಪ ದಲ್ಲೋಡಿ

ಪುರಾಣ ಕಾಲದ ಬಲಿ ಚಕ್ರವರ್ತಿಯು ಭರತ ಭೂಮಿಯ ಕೃಷಿ ಕ್ಷೇತ್ರದ ಯಜಮಾನನಾಗಿದ್ದನು. “ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬುದು ಎರಡನೇ ಮನುವಾದ ಸ್ವಾರೋಚಿಷನ ಕಾಲದಲ್ಲಿ ವಿಶ್ವದ ಪ್ರಥಮ ಕೃಷಿಕನಾದ ಆದಿಮನಿಂದ ಹುಟ್ಟಿಕೊಂಡು ಬಲಿರಾಜನ ಕಾಲದಲ್ಲಿ ಸಂಪೂರ್ಣ ಪ್ರಗತಿಯನ್ನು ಕಂಡಿತು. ಇದರ ನಿಮಿತ್ತವಾಗಿಯೇ ಒಂದು ಕಾಲದ ತುಳುನಾಡಿನ ರೈತರು ತಮ್ಮ ಬೇಸಾಯದ ಗದ್ದೆಗಳ ಹುಣಿಗಳಲ್ಲಿ ಸಾಲು ಸಾಲಾಗಿ ದೀಪಗಳನ್ನುರಿಸಿ, ಬಲಿರಾಜನನ್ನು ಸಾಂಕೇತಿಕವಾಗಿ ಪ್ರತಿಷ್ಠಾಪಿಸಿ ದೀಪಾವಳಿಯನ್ನು ಆಚರಿಸುತ್ತಿದ್ದರು ಎಂದು ಖ್ಯಾತ ಸಂಶೋಧಕ ಹಾಗೂ ಹಿರಿಯ ಸಾಹಿತಿ ಡಾ|| ದೇಜಪ್ಪ ದಲ್ಲೋಡಿ ತಿಳಿಸಿದರು

ಅವರು ದಿನಾಂಕ 18.10.2017ರಂದು ಯುವವಾಹಿನಿ(ರಿ) ಬಜಪೆ ಘಟಕದ ಆಶ್ರಯದಲ್ಲಿ ಜರುಗಿದ ‘ತುಡಾರ ಪರ್ಬ – 2017’ ಆಚರಣೆಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಬಲಿ ಚಕ್ರವರ್ತಿಗೂ ತುಳುನಾಡಿಗೂ ಇದ್ದ ಅವಿನಾಭಾವ ಸಂಬಂಧವನ್ನು ವಿವರಿಸಿದರು.

ಯುವವಾಹಿನಿ(ರಿ) ಕೇಂದ್ರ ಸಮಿತಿ (ರಿ) ಮಂಗಳೂರು, ಇದರ ಅಧ್ಯಕ್ಷರಾದ ಯಶವಂತ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಬಜ್ಪೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಬಿ. ಸುಕುಮಾರ್ ಸಾಲ್ಯಾನ್ ಹಾಗೂ ಯುವವಾಹಿನಿ (ರಿ) ಬಜ್ಪೆ ಘಟಕದ ಸಲಹೆಗಾರರಾದ ರವಿಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ(ರಿ) ಬಜಪೆ ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಪೂಜಾರಿ ಎಲ್ಲರನ್ನು ಸ್ವಾಗತಿಸಿದರು. ನಿರ್ಮಲ ಗೋಪಾಲ್ ‌ವಂದಿಸಿದರು. ಕನಕಾ ಮೋಹನ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಬಲಿಯೇಂದ್ರ ಪೂಜೆ ನೆರವೇರಿಸಿ ದೀಪಾವಳಿಯ‌ ಸಿಹಿ ತಿಂಡಿಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!