ಬಿ. ತಮ್ಮಯ -ರಜತ ರಶ್ಮಿ -2012

ನಾ ಕಂಡ ಯುವವಾಹಿನಿ

  ಬಿ. ತಮ್ಮಯ

ತುಳುನಾಡಿನ ಬಿಲ್ಲವ ಸಮಾಜ ಪ್ರಾಚೀನತೆಯಲ್ಲಿ, ಜನ ಸಂಖ್ಯೆಯಲ್ಲಿ, ಗುತ್ತು ಬರ್ಕೆ, ಭಾವ, ನಟ್ಟಿಲ್‌ಗಳ ಸ್ಥಾನಮಾನದೊಂದಿಗೆ ಆಳರಸರ ದಂಡನಾಯಕರಾಗಿ ಕ್ಷಾತ್ರ ತೇಜದಲ್ಲಿ ಮೆರೆದ ಸಮಾಜವಾಗಿತ್ತು. ಕಾಲಕ್ರಮೇಣ ಅಧೋಗತಿಗಿಳಿದು ಅಸ್ಪೃಶ್ಯತೆ ಶೋಷಣೆಗಳ ಹೊಡೆತದಿಂದ ಜರ್ಜರಿತವಾದ ಈ ಸಮಾಜ 1908 ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ತುಳುನಾಡಿಗೆ ಪಾದಾರ್ಪಣೆ ಮಾಡಿ ಕುದ್ರೋಳಿ ಗೋಕರ್ಣನಾಥನ ಸ್ಥಾಪನೆ ಮಾಡಿದ ಮೇಲೆ ಸಮಾಜ ಅಭಿವೃದ್ಧಿಯ ಕಡೆ ಮುಖ ಮಾಡಿತು. ಅನಕ್ಷರಸ್ಥರಾಗಿ, ಇತರರ ಮೋಸದಿಂದ ಎಲ್ಲವನ್ನು ಕಳಕೊಂಡ ಈ ಸಮಾಜ ಶಿಕ್ಷಣದ ಮಹತ್ವವನ್ನು ತಿಳಿದು ಶಿಕ್ಷಣವನ್ನು ತಮ್ಮ ಮಕ್ಕಳಿಗೆ ನೀಡುವ ಪ್ರಯತ್ನ ಮಾಡಿತು. ಅನೇಕ ಕಡೆ ಬಿಲ್ಲವ ಸಂಘಗಳು, ಗುರು ಮಂದಿರಗಳ ನಿರ್ಮಾಣವಾಯಿತು. ಆದರೂ ಸಮಾಜ ಆಧುನಿಕತೆಯ ಸವಾಲುಗಳನ್ನು ಎದುರಿಸುವಲ್ಲಿ ವಿಫಲವಾಯಿತು. ಸಮಾಜದ ಐಕ್ಯತೆ ಕಡಿಮೆಯಾಯಿತು. ಇದರಿಂದಾಗಿ ಸಮಾಜ ಮತ್ತೆ ಹಿಂದಿನ ಸ್ಥಿತಿಗೆ ಹೋಗುವ ಭೀತಿ ನಮ್ಮ ಕೆಲ ಯುವಕರಲ್ಲಿ ಉಂಟಾಯಿತು. ಅದಕ್ಕಾಗಿ ವಿದ್ಯಾವಂತ, ಉದ್ಯೋಗಸ್ಥ ಪ್ರಗತಿಪರ ಚಿಂತನೆ ಇರುವ ಕೆಲ ಯುವಕರು ಮಂಗಳೂರಲ್ಲಿ ಸೇರಿ ಈ ಸಮಾಜಕ್ಕೆ ತಾವೇನಾದರೂ ಮಾಡಬೇಕೆಂಬ ನೆಲೆಯಲ್ಲಿ ಚಿಂತಿಸಿ ಹುಟ್ಟು ಹಾಕಿದ ಸಂಘವೇ ಈ ಯುವವಾಹಿನಿ!

ದಿನಾಂಕ 2-10-1987 ರಂದು ವಿಜಯ ದಶಮಿಯ ಶುಭ ದಿನದಂದು ಶ್ರೀ ಆದೀಶ್, ಶ್ರೀ ಎಂ. ಸಂಜೀವ ಪೂಜಾರಿ, ಶ್ರೀ ಅಣ್ಣು ಪೂಜಾರಿ, ಶ್ರೀ ಎಂ. ಶಶಿಧರ್ ಕೋಟ್ಯಾನ್ ಮೊದಲಾದ ಯುವಕರು ಹಾಗೂ ಶ್ರೀ ಮಂಜುನಾಥ ಸುವರ್ಣರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಪ್ರಾರಂಭವಾಯಿತು. ಇದರ ಮೊದಲ ವಾರ್ಷಿಕ ಸಮಾವೇಶವು 1988 ರಲ್ಲಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಸುಂಕದಕಟ್ಟೆಯಲ್ಲಿ ಜರಗಿತು. ಇಲ್ಲಿ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ರೀ ಎಂ. ಸಂಜೀವ ಪೂಜಾರಿ ಅಧ್ಯಕ್ಷರಾಗಿ ಆಯ್ಕೆ ಆದರು. ಸಲಹಾ ಸಮಿತಿಯಲ್ಲಿ ಶ್ರೀ ಪಿ. ನಾರಾಯಣ ಕೊಂಚಾಡಿ, ಶ್ರೀ ಬಿ. ತಮ್ಮಯ್ಯ, ಶ್ರೀ ಮೋಹನ್ ಕೋಟ್ಯಾನ್, ಶ್ರೀ ಮಂಜುನಾಥ ಸುವರ್ಣ, ಡಾ| ಶಿವರಾಜನ್ ಕೆ., ಡಾ| ಎನ್.ಟಿ. ಅಂಚನ್, ಶ್ರೀ ಅಡ್ವೆ ರವೀಂದ್ರ ಪೂಜಾರಿ, ಇವರ ಸಲಹೆ ಸಹಕಾರದೊಂದಿಗೆ ’ಯುವವಾಹಿನಿ’ ಸಮಾಜ ಮುಖಿಯಾಗಿ ಹರಿಯಲು ಪ್ರಾರಂಭಿಸಿತು. ’ವಿದ್ಯೆ, ಉದ್ಯೋಗ, ಸಂಪರ್ಕ’ ಎಂಬ ಮೂರು ಮುಖ್ಯ ಧ್ಯೇಯಗಳೊಂದಿಗೆ, ನಾರಾಯಣ ಗುರುಗಳ ತತ್ವ ಆದರ್ಶಗಳ ಬೆಳಕಿನಲ್ಲಿ ಯುವವಾಹಿನಿ ನಿರಂತರವಾಗಿ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ, ತನ್ನ ಘಟಕಗಳನ್ನು ವಿಸ್ತರಿಸುತ್ತಾ, ಹೊಸ ಯುವಕರನ್ನು ಯುವವಾಹಿನಿಗೆ ಸೇರಿಸುತ್ತಾ ತಾನು ಬೆಳೆದು ಸಮಾಜವನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಲು ಪ್ರಯತ್ನಿಸುತ್ತಾ ಬಂದಿದೆ. ’ಸಂಘರ್ಷದಿಂದ ದೂರ, ಸಂಘಟನೆಗೆ ಹತ್ತಿರ’ ಎಂಬುದು ಯುವವಾಹಿನಿಯ ತತ್ವ. ದ್ವೇಷಕ್ಕಿಂತ ಪ್ರೀತಿ ಮೇಲು ಎಂಬುದು ಇವರ ನಂಬುಗೆ. ತಮ್ಮ ಉದ್ದೇಶ ಮತ್ತು ಕೆಲಸ ಒಳ್ಳೆಯದಿದ್ದರೆ ಜನ ಬೆಂಬಲ ಇದ್ದೇ ಇರುತ್ತದೆ ಎಂಬುದು ಅನುಭವ. ಆದುದರಿಂದಲೇ 25 ರ ಹರಯಕ್ಕೆ ಈ ಸಂಘಟನೆ ಬಂದು ನಿಂತಿದೆ. ಈ ಸಮಾಜದ ಮುಖ್ಯ ಆಸ್ತಿ ಯುವಕರು. ಅವರನ್ನು ತಿದ್ದಿ ತೀಡಿ ಸಿದ್ಧಗೊಳಿಸಿದರೆ ಸಮಾಜ ಬಲಿಷ್ಠವಾಗುತ್ತದೆ ಎಂಬುದು ಯುವವಾಹಿನಿಯ ನಂಬಿಕೆ. ಆ ಯುವಕರೇ ಮುಂದೆ ಸಮಾಜದ ಧುರೀಣರು ಆಗುತ್ತಾರೆ. ಅದಕ್ಕಾಗಿ ಯುವಕರಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಹೊರತೆಗೆದು ಅವರ ಸರ್ವತೋಮುಖ ಅಭಿವೃದ್ಧಿಯ ಮೂಲಕ ನಾಯಕತ್ವದ ಗುಣಗಳನ್ನು ತುಂಬಿ ಅವರನ್ನು ಯೋಗ್ಯ ನಾಗರಿಕರನ್ನಾಗಿ ಪರಿವರ್ತಿಸಿ ಸಮಾಜಮುಖಿಯನ್ನಾಗಿ ಮಾಡುವ ಕೆಲಸವನ್ನು ಯುವವಾಹಿನಿ ನಿರಂತರವಾಗಿ ಮಾಡುತ್ತಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ, ಸಾಂಸ್ಕೃತಿಕ, ಸಾಹಿತ್ಯ, ಕ್ರೀಡೆ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ಸುಗೊಳಿಸಿದ ಯುವವಾಹಿನಿ, ರಾಜಕೀಯ ಕ್ಷೇತ್ರದಲ್ಲಿ ಸಮಾಜದ ವ್ಯಕ್ತಿಗಳ ಪರವಾಗಿ ಸದಾ ಬೆಂಬಲ ನೀಡುತ್ತಾ ಬಂದಿದೆ. ಯುವಕರಲ್ಲಿ ರಾಜಕೀಯ ಪ್ರಜ್ಞೆಗಳನ್ನು ಉಂಟು ಮಾಡಿ ಅವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದೆ. ಯುವವಾಹಿನಿ ನಡೆದು ಬಂದ ೨೫ ಸಂವತ್ಸರಗಳ ಮಜಲುಗಳನ್ನು ನೋಡೋಣ.

ವಿದ್ಯಾನಿಧಿ: ವಿದ್ಯೆಯಿಂದ ಸ್ವತಂತ್ರರಾಗಿ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದ ಪ್ರಕಾರ ವಿದ್ಯೆಯೊಂದೇ ಸಮಾಜದ ಶೋಷಣೆಯನ್ನು ತಡೆಯಬಲ್ಲುದು ಎಂಬುದು ಯುವವಾಹಿನಿಯ ನಂಬಿಕೆ. ಅನೇಕ ಬಿಲ್ಲವ ಸಮಾಜದ ಬುದ್ಧಿವಂತ ಮಕ್ಕಳು ಬಡತನದಿಂದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಸಂದರ್ಭಗಳಿವೆ. ಅದನ್ನು ಮನಗಂಡು ಅಂತಹ ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರಿಸುವುದಕ್ಕೆ ಸಹಾಯ ಮಾಡಲೆಂದೇ 1992-93ರಲ್ಲಿ ವಿದ್ಯಾನಿಧಿಯ ಸ್ಥಾಪನೆ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳ ವಿವರಗಳನ್ನು ಪಡೆದು ಅವರ ಮನೆಗೆ ಭೇಟಿನೀಡಿ ಅವರ ಸ್ಥಿತಿ-ಗತಿಗಳನ್ನು ತಿಳಿದು ಅವರಿಗೆ ವಿದ್ಯಾನಿಧಿಯಿಂದ ಸಹಾಯ ಧನ ವಿತರಿಸಲಾಗುತ್ತದೆ. ಒಮ್ಮೆ ಯುವವಾಹಿನಿಯ ಸಂಪರ್ಕಕ್ಕೆ ಬಂದ ವಿದ್ಯಾರ್ಥಿ ಆತನ ಕಲಿಕೆ ಪೂರ್ಣವಾಗುವವರೆಗೆ ಆತನಿಗೆ ಧನ ಸಹಾಯ ನೀಡಲಾಗುತ್ತದೆ. ನಂತರ ಉದ್ಯೋಗದ ಬಗ್ಗೆ ಮಾಹಿತಿ, ಶಿಕ್ಷಣ ಮಾಹಿತಿ ನೀತಿ ಅವರನ್ನು ಬೇರೆ ಬೇರೆ ಉದ್ಯೋಗ ಕ್ಷೇತ್ರಗಳಿಗೆ ಅಣಿಗೊಳಿಸಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳ ಪರಿಶ್ರಮದ ಮೌಲ್ಯ ಮಾಪನ ಮಾಡಿ ವೈಯಕ್ತಿಕ ಸಲಹೆಗಳನ್ನು ನೀಡಲಾಗುತ್ತದೆ. ಯುವವಾಹಿನಿ ಪ್ರತೀ ವರ್ಷ ಶಿಕ್ಷಣ ಮಾಹಿತಿ ಶಿಬಿರ, ಉದ್ಯೋಗ ಮಾಹಿತಿ ಶಿಬಿರ, ಕೋರ್ಸುಗಳ ಆಯ್ಕೆ ಶಿಬಿರ ಮೊದಲಾದುದನ್ನು ಸೂಕ್ತ ಸಂಪನ್ಮೂಲ ವ್ಯಕ್ತಿಗಳಿಂದ ಕೊಡಿಸುತ್ತದೆ. ಅನೇಕ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಜೀವನದಲ್ಲಿ ಅಭಿವೃದ್ಧಿ ಹೊಂದಿದ್ದಾರೆ. ಯುವವಾಹಿನಿಯು ವಿದ್ಯಾರ್ಥಿಗಳ ಪಾಲಿಗೆ ಹೆತ್ತವರ ಪಾತ್ರವನ್ನು ವಹಿಸುತ್ತಿದೆ. ವಿದ್ಯೆಗೆ ಪ್ರೋತ್ಸಾಹ ನೀಡುವ ಬೇರೆ ಬೇರೆ ಸಂಸ್ಥೆಗಳೊಂದಿಗೆ ಮುಕ್ತ ಸಹಕಾರವನ್ನು ನೀಡುತ್ತಾ ಬಂದಿದೆ. ಯುವವಾಹಿನಿಯ ವಿದ್ಯಾನಿಧಿಯ ಸಹಾಯ ಪಡೆದವರು ತುಳುನಾಡಿನ ಮೂಲೆ ಮೂಲೆಗಳಲ್ಲಿ ಇದ್ದಾರೆ.

1992-93ರಿಂದ 2010-11ರ ವರೆಗೆ ಸುಮಾರು 708 ಜನ ಯುವವಾಹಿನಿಯಿಂದ ಸಹಾಯ ಪಡೆದಿದ್ದಾರೆ. ಸಹಾಯಧನದ ಮೊತ್ತ 8,73,100  ರೂಪಾಯಿಗಳು. ಈ ಕ್ಷೇತ್ರಕ್ಕೆ ಹಣದ ಅಗತ್ಯ ಇದೆ. ಉಳ್ಳವರಲ್ಲಿ ಬೇಡಿ ಇಲ್ಲದವರಿಗೆ ಹಂಚುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ.

ಉದ್ಯೋಗ: ಶಿಕ್ಷಣವನ್ನು ಹೊಂದಿದ ವಿದ್ಯಾರ್ಥಿಗಳು ತಮ್ಮ ಕಾಲಿನ ಮೇಲೆ ನಿಲ್ಲಬೇಕಾದರೆ ಅವರಿಗೆ ಉದ್ಯೋಗದ ಅಗತ್ಯ ಇದೆ. ಯುವವಾಹಿನಿಯಲ್ಲಿ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು ಇದ್ದಾರೆ. ಅವರು ಎಲ್ಲೆಲ್ಲಿ ಖಾಲಿ ಹುದ್ದೆಗಳಿವೆ – ಉದ್ಯೋಗ ವಾರ್ತೆಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಅರ್ಹರಿಗೆ ಮಾಹಿತಿ ನೀಡುವ ವ್ಯವಸ್ಥೆ ಇದೆ. ಅಲ್ಲದೆ ತರಬೇತಿಗಳನ್ನು ನಡೆಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತೆ ಉದ್ಯೋಗಾಂಕ್ಷಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಕೆಎಎಸ್, ಐಪಿಎಸ್, ಐಎಎಸ್ ಪರೀಕ್ಷೆ ಬರೆಯುವವರಿಗೂ ಮಾಹಿತಿಗಳನ್ನು ನೀಡಲಾಗುತ್ತದೆ. ಉದ್ಯಮಿಗಳ ಸಮಾವೇಶ ನಡೆಸಿ ಆ ಮೂಲಕ ಅರ್ಹರಿಗೆ ನೌಕರಿ ದೊರಕಿಸುವ ಪ್ರಯತ್ನ ಮಾಡಲಾಗುತ್ತದೆ. ಅಲ್ಲದೆ ಸ್ವ-ಉದ್ಯೋಗದ ಮಾಹಿತಿ ಶಿಬಿರಗಳನ್ನು ನಡೆಸಲಾಗುತ್ತದೆ. ಗಿಡಮೂಲಿಕೆಗಳ ಮಾಹಿತಿ ಮುಂತಾದ ಶಿಬಿರಗಳನ್ನು ನಡೆಸುತ್ತಾ ಸಮಾಜದ ಎಲ್ಲಾ ವರ್ಗದ ಜನರನ್ನು ಯುವವಾಹಿನಿ ತಲುಪಿದೆ ಎನ್ನುವುದೇ ಸಂತೋಷದ ವಿಚಾರವಾಗಿದೆ.

ಸಂಪರ್ಕ: ಯುವವಾಹಿನಿಯ ವಿಶೇಷವಾದ ಒಂದು ಧ್ಯೇಯ ಎಂದರೆ ಸಂಪರ್ಕ. ಯುವವಾಹಿನಿಯ ಸದಸ್ಯರಿಗೆ ಬೇರೆ ಬೇರೆ ಊರಿನ ಯುವಕರ ಸಂಪರ್ಕವಾಗುತ್ತದೆ. ಬಂಟ್ವಾಳದ ಯುವಕ ಉಡುಪಿಯ ಯುವಕನ ಸಂಪರ್ಕಕ್ಕೆ ಬರುತ್ತಾನೆ. ಅಂತೆಯೇ ಉಡುಪಿ, ಬಂಟ್ವಾಳದ ಯುವಕರಿಗೆ ಮಂಗಳೂರಿನ ಯುವಕರ ಸಂಪರ್ಕವಾಗುತ್ತದೆ – ಇದರಿಂದ ಯುವಕರ ಜ್ಞಾನ, ತಿಳುವಳಿಕೆ ಹೆಚ್ಚಾಗುತ್ತದೆ. ಮಾಹಿತಿಗಳ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಸಮಾನ ಆಸಕ್ತಿಯ ಯುವಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದಾಗಿದೆ. ಸಂಪರ್ಕ ಸ್ನೇಹಕ್ಕೆ ಮೂಲ ಎಂಬ ನಂಬಿಕೆ ಯುವವಾಹಿನಿಯದ್ದಾಗಿದೆ – ಇದಲ್ಲದೆ ಯುವವಾಹಿನಿಯು ಅಂತರ್‌ಘಟಕ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಅಲ್ಲದೆ ಸಂಸದೀಯ ನಡವಳಿ, ಭಾಷಣ ಕಲೆ, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸುತ್ತದೆ, ಕತೆ, ಕವನ, ಲೇಖನಗಳ ಕಮ್ಮಟ, ಸಾಹಿತ್ಯ ಸಂವಾದಗಳನ್ನು ನಡೆಸುತ್ತದೆ. ಇದರಿಂದ ಅನೇಕ ಸಮಾನ ಮನಸ್ಕ ಯುವಕರು ಬೆಳೆಯಲು ಸಾಧ್ಯವಾಗುತ್ತದೆ. ತುಳು ಸಂಸ್ಕೃತಿಯನ್ನು ಯುವಕರಿಗೆ ಪರಿಚಯಿಸಲು, ಆಟಿದ ಒಂಜಿದಿನ, ಕಾರ್ಯಕ್ರಮವನ್ನು ಮೊದಲು ಪ್ರಾರಂಭಿಸಿದ್ದೆ ಯುವವಾಹಿನಿಯ ಮೂಲ್ಕಿ ಘಟಕ. ಈಗ ತುಳುನಾಡಿನಾದ್ಯಂತ ಈ ಕಾರ್ಯಕ್ರಮ ಜರಗುತ್ತದೆ. ಅಲ್ಲದೆ ತುಡಾರಪರ್ಬ, ಜಾನಪದ ಕುಣಿತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಮೂಲ್ಕಿ ಚಂದ್ರಶೇಖರ ಸುವರ್ಣರ ನಿರ್ದೇಶನದಲ್ಲಿ ’ತುಳುನಾಡ ವೈಭವ’ ದೇಶ ವಿದೇಶಗಳಲ್ಲಿ ಮೆಚ್ಚುಗೆ ಪಡೆದಿದೆ. ಸಸಿಹಿತ್ಲು ಘಟಕವು ಜಾನಪದ ನೃತ್ಯಗಳಿಗೆ ಹೆಸರು ಪಡೆದಿದೆ. ಪುಣ್ಯ ಕ್ಷೇತ್ರಗಳ ಯಾತ್ರೆ, ಪ್ರವಾಸ ಕಾರ್ಯಕ್ರಮಗಳ ಮೂಲಕ ಸಂಪರ್ಕದ ಕೊಂಡಿ ಬೆಳೆಸುತ್ತಿದೆ.

ವಿಶುಕುಮಾರ್ ದತ್ತಿನಿಧಿ: ವಿಶುಕುಮಾರ್ ಬಿಲ್ಲವ ಸಮಾಜದ ಶ್ರೇಷ್ಠ ಸಾಹಿತಿ. ಕಾದಂಬರಿ, ಸಣ್ಣ ಕತೆ, ನಾಟಕ, ಸಿನಿಮಾ ಮೊದಲಾದ ಕ್ಷೇತ್ರದಲ್ಲಿ ಅವರು ಬಹಳ ಹೆಸರು ಮಾಡಿದವರು. ತನ್ನ ಅಲ್ಪ ಆಯುಷ್ಯದಲ್ಲಿಯೇ ಮಾರಕ ಖಾಯಿಲೆಯಿಂದ ತೀರಿಕೊಂಡು ಕೀರ್ತಿಶೇಷರಾಗಿರುವ ವಿಶುಕುಮಾರರ ಘನತೆ, ಛಲ, ಸಾಧನೆಗಳನ್ನು ಮನಗಂಡು ಯುವವಾಹಿನಿಯು ದಿನಾಂಕ 3-11-2002 ರಲ್ಲಿ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ನಡೆಸಿತು. ಅವರ ಹೆಸರಿನಲ್ಲಿ ದತ್ತಿನಿಧಿ ಒಂದನ್ನು ಸ್ಥಾಪಿಸಿ ಪ್ರತಿ ವರ್ಷ ವಿಶುಕುಮಾರ್ ಪ್ರಶಸ್ತಿಯನ್ನು ನೀಡುವ ಮೂಲಕ ಸಮಾಜದ ಆ ಧೀಮಂತ ಸಾಹಿತಿ ದಿ| ವಿಶುಕುಮಾರರ ಹೆಸರನ್ನು ಶಾಶ್ವತವಾಗಿ ಜನಮನದಲ್ಲಿ ನೆಲೆಸುವಂತೆ ಮಾಡಿದೆ. ಅಲ್ಲದೆ ಸಮಾಜದ ಉದಯೋನ್ಮುಖ ಬರಹಗಾರರಿಗಾಗಿ ಪ್ರಭಾಕರ ನೀರ್‌ಮಾರ್ಗ ಯುವವಾಹಿನಿ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ. ಯುವವಾಹಿನಿಯು ಯುವವಾಹಿನಿ ಪ್ರಕಾಶನದ ಮೂಲಕ ಸುಮಾರು 12 ಕೃತಿಗಳನ್ನು ಹೊರ ತಂದಿದೆ – ಹೀಗೆ ಯುವವಾಹಿನಿಯೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.

ಸಮಾವೇಶಗಳು ಮತ್ತು ಗುರುಸಂದೇಶ ಯಾತ್ರೆ : ಯುವವಾಹಿನಿ ಸಂಪರ್ಕದ ದೃಷ್ಠಿಯಿಂದ ವಾರ್ಷಿಕ ಸಮಾವೇಶಗಳನ್ನು ನಡೆಸಿಕೊಂಡು ಬಂದಿದೆ. ಬೇರೆ ಬೇರೆ ಘಟಕಗಳ ಆತಿಥ್ಯದಲ್ಲಿ ಬೇರೆ ಬೇರೆ ಊರುಗಳಲ್ಲಿ ನಡೆಸುವುದ ರಿಂದ ಆ ಊರಿನ ಗಣ್ಯರ ಸಂಪರ್ಕ ಯುವವಾಹಿನಿಗೆ ಲಭಿಸುತ್ತದೆ. ಅಲ್ಲದೆ ಆ ಊರಿನ ಜನರಿಗೂ ಯುವವಾಹಿನಿಯ ಪರಿ ಚಯವಾಗುತ್ತದೆ. ಯುವವಾಹಿನಿ ಅನೇಕ ಇತರ ಸಮಾವೇಶ ಗಳನ್ನು ಸಮಾಜದ ಎಲ್ಲಾ ಸ್ತರದ ಜನರಿಗಾಗಿ ನಡೆಸಿದೆ – ಉದ್ಯೋಗಸ್ಥ ಸಮಾಜ ಬಾಂಧವರ ಸಮಾವೇಶದಲ್ಲಿ ಉದ್ಯೋಗಸ್ಥರನ್ನು ಒಂದು ಕಡೆ ಸೇರಿಸಿ ಅವರು ಸಮಾಜಕ್ಕೆ ಏನು ಕೊಡುಗೆ ನೀಡಬಹುದೆಂದು ತಿಳಿಸಿದೆ. ಉದ್ಯಮಿಗಳ ಸಮಾವೇಶ ನಡೆಸಿ ಅವರೂ ಸಮಾಜ ಸೇವೆಗೆ ಬರುವಂತೆ ವಿನಂತಿಸಲಾಗಿದೆ. ಶಿಕ್ಷಕರ ಸಮಾವೇಶ ಮಾಡಿ ನಮ್ಮ ಸಮಾಜದ ಮಕ್ಕಳಿಗೆ ವಿಶೇಷವಾಗಿ ಶಿಕ್ಷಣದ ಮಾಹಿತಿ ನೀಡುವಂತೆ ಪ್ರೇರೇಪಿಸಿದೆ. ಮಹಿಳಾ ಸಮಾವೇಶ ನಡೆಸಿ ಮಹಿಳೆಯರು ಸಮಾಜಸೇವೆ ಮಾಡುವರೇ ಪ್ರೋತ್ಸಾಹಿಸಲಾಗಿದೆ. ಶಾಂತಿಗಳ ಸಮಾವೇಶ ನಡೆಸಿ ಸಮಾಜದ ಮೂಢನಂಬಿಕೆಗಳನ್ನು ದೂರಮಾಡುವಂತೆ ವಿನಂತಿಸಲಾಗಿದೆ. ವಕೀಲರು, ವೈದ್ಯರು, ಇಂಜಿನಿಯರುಗಳ ಸಮಾವೇಶ ನಡೆಸಿ ಸಮಾಜ ಬಾಂಧವರ ಕಡೆ ಅವರ ಸಹಕಾರ ಕೋರಲಾಗಿದೆ. ’ಬಿಲ್ಲವ ಸಮಾಜಕ್ಕೊಂದು ಕಾಯಕಲ್ಪ ಎಂಬ ಕಾರ್ಯಕ್ರಮದಲ್ಲಿ ಎಲ್ಲಾ ಬಿಲ್ಲವ ಸಂಘಗಳು, ಸಮಾನ ಮನಸ್ಕರಾಗಿ ಸಂಘಟಿತರಾಗಿ ಸಮಾಜ ಸೇವೆ ಮಾಡುವ ಅಗತ್ಯ ಈ ಸಂದರ್ಭಕ್ಕೆ ಅತ್ಯವಶ್ಯಕ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ.

ಯುವವಾಹಿನಿ ನಡೆಸಿದ ಗುರು ಸಂದೇಶಯಾತ್ರೆಯ ಮೂಲಕ ಇಡೀ ತುಳುನಾಡಿನ ಎಲ್ಲಾ ವರ್ಗದ ಜನರಿಗೂ ನಾರಾಯಣ ಗುರುಗಳ ಸಂದೇಶವನ್ನು ಮುಟ್ಟಿಸಲಾಗಿದೆ. ಬನ್ನಂಜೆ, ಮೂಲ್ಕಿ ಅಲ್ಲದೆ 29-8-1999 ರಲ್ಲಿ ಸುಮಾರು ಎಂಟು ಕಡೆಯಿಂದ ಗುರು ಸಂದೇಶ ಯಾತ್ರೆಯು ಬಹಳ ಶಿಸ್ತಿನಿಂದ ಬಂದು ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಸಮಾವೇಶಗೊಂಡುದುದನ್ನು ಕಂಡ ಆರಕ್ಷಣಾ ಇಲಾಖೆಯ ಅಧಿಕಾರಿಗಳೇ ಶಿಸ್ತು ಮತ್ತು ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. 8-9-2002 ರಲ್ಲಿ ಗುರುಸಂದೇಶ ಯಾತ್ರೆ ಎಲ್ಲಾ ಕಡೆಗಳಿಂದ ಕಟಪಾಡಿ ಕ್ಷೇತ್ರಕ್ಕೆ ಬಂದು ಸೇರಿ ಸಮಾವೇಶ ಪೂರ್ಣಗೊಂಡಿರುವುದು. ಅಲ್ಲದೆ ಇತ್ತೀಚೆಗೆ ಯಾವುದೇ ಗುರು ಸಂದೇಶ ಯಾತ್ರೆಗಳನ್ನು ನಡೆಸಬೇಕಾದರೆ ಯುವವಾಹಿನಿಯವರ ಸಹಕಾರ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಆರೋಗ್ಯನಿಧಿ: ಸಮಾಜದ ಕಡುಬಡವರು ಅನಾ ರೋಗ್ಯದಿಂದ ಬಳಲುತ್ತಿದ್ದವರು ವೈದ್ಯಕೀಯ ಸಹಾಯ ಕೇಳಿ ಅರ್ಜಿ ಸಲ್ಲಿಸುತ್ತಾರೆ. ಅವರಿಗೆ ಸಹಾಯ ಮಾಡಲು ಆರೋಗ್ಯ ನಿಧಿ ಸ್ಥಾಪಿಸಲಾಗಿದೆ. ಈ ನಿಧಿಯಿಂದ ಅನಾರೋಗ್ಯ ಪೀಡಿತರಿಗೆ ಧನ ಸಹಾಯ ನೀಡಲಾಗುತ್ತದೆ. ಅಲ್ಲದೆ ರಕ್ತ ಬೇಕಾದವರು ಯುವವಾಹಿನಿಯನ್ನು ಸಂಪರ್ಕಿಸಿದರೆ ರಕ್ತದಾನ ಕೂಡ ಮಾಡಲಾಗುತ್ತದೆ. ಇತ್ತೀಚೆಗೆ ನಡೆದ ಒಂದು ಘಟನೆ ತಮಗೆ ತಿಳಿಸಬೇಕು. ನಮ್ಮ ವಿದ್ಯಾನಿಧಿಯಿಂದ ಸಹಾಯ ಪಡೆದ ವಿದ್ಯಾರ್ಥಿಯ ತಂಗಿ ಕಾಲು ನೋವಿನಿಂದ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾದಳು. ಈ ವಿಚಾರ ಪಡುಬಿದ್ರಿಯ ವಿದ್ಯಾನಿಧಿ ಸಂಚಾಲಕರಿಗೆ ತಿಳಿಸಿದರು. ಅವರು ಬಂಟ್ವಾಳ ಯುವವಾಹಿನಿ ಘಟಕಕ್ಕೆ ತಿಳಿಸಿದರು. ಯುವವಾಹಿನಿ ಬಂಟ್ವಾಳ ಘಟಕ ಸ್ಪಂದನ ಕಾರ್ಯಕ್ರಮದಡಿ ಅವರಿಗೆ ಧನ ಸಹಾಯ ನೀಡಿದರು. ಆ ಹುಡುಗಿಯನ್ನು ದೇರಳಕಟ್ಟೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಬೇಕಾಯಿತು. ಆಗ ಸೇವಾಂಜಲಿ ಟ್ರಸ್ಟ್ ಮೂಲಕ ಅವರಿಗೆ ಧರ್ಮಾರ್ಥ ಆರೋಗ್ಯ ಕಾರ್ಡು ನೀಡಲಾಯಿತು. ರಕ್ತ ಬೇಕೆಂದಾಗ ಮಂಗಳೂರು ಘಟಕಕ್ಕೆ ವಿಚಾರ ತಿಳಿಸಲಾಯಿತು. ಆದರೆ ರಕ್ತದ ಅಗತ್ಯ ಇಲ್ಲದೆ ಚಿಕಿತ್ಸೆ ಫಲಕಾರಿಯಾಗಿ ಈಗ ಹುಡುಗಿ ಶಾಲೆಗೆ ಹೋಗುತ್ತಿದ್ದಾಳೆ. ಇದು ಯುವವಾಹಿನಿಯು ಬಡವರಿಗೆ ಸ್ಪಂದಿಸುವ ರೀತಿಯ ಒಂದು ಉದಾಹರಣೆಯಾಗಿದೆ.

ಸಹಾಯ ನಿಧಿ: ಮನೆ ಬಿದ್ದಾಗ, ಮನೆ ದುರಸ್ಥಿಗೆ, ಕ್ರೀಡೆಯ ಬಗ್ಗೆ ಸಹಾಯ ಕೇಳಿ ಬರುವ ಅರ್ಜಿಗಳನ್ನು ಪರಿಶೀಲಿಸಿ ಅವರಿಗೆ ಸಹಾಯ ಮಾಡುವರೇ ಈ ಸಹಾಯ ನಿಧಿಯನ್ನು ಸ್ಥಾಪಿಸಲಾಗಿದೆ. ಈ ನಿಧಿಯಿಂದ ಅನೇಕ ಸಮಾಜದ ಬಡವರ ಕಣ್ಣೀರನ್ನು ಒರಸಲಾಗಿದೆ. ಅಲ್ಲದೆ ಕೆಲವು ಕಡೆ ಅನಾಥರಿಗೆ ಮನೆಯನ್ನೇ ಕಟ್ಟಿ ಕೊಟ್ಟ ಉದಾಹರಣೆಗಳು ಇದೆ. ಆದರೆ ಯುವವಾಹಿನಿ ಯಾವುದೇ ಸಮಾಜ ಸೇವೆಯನ್ನು ಪ್ರಚಾರಕ್ಕಾಗಿ ಮಾಡುವುದಿಲ್ಲ. ಸಮಾಜ ಸೇವೆ ಎಂದರೆ ಸಮಾಜದ ಋಣವನ್ನು ಕಡಿಮೆ ಮಾಡಿಕೊಳ್ಳುವುದೇ ವಿನಃ ಬೇರೇನು ಅಲ್ಲ ಎಂಬ ನಾರಾಯಣ ಗುರುಗಳ ಮಾತನ್ನು ಅಕ್ಷರಸಃ ಪಾಲಿಸುತ್ತಿದೆ ಯುವವಾಹಿನಿ. 4-9-2005 ರಂದು ಸುರತ್ಕಲ್ ಘಟಕದ ಆತಿಥ್ಯದಲ್ಲಿ ಸದಾನಂದ ಸುವರ್ಣರ ಸಹಕಾರದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಕ್ಷ್ಯ ಚಿತ್ರವನ್ನು ಮಲೆಯಾಳಂ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸಿ ಬಿಡುಗಡೆ ಮಾಡಿದ್ದಾರೆ. ಅದರ ಮಾರಾಟದಿಂದ ಬಂದ ಮೊತ್ತವನ್ನು ವಿದ್ಯಾನಿಧಿಗೆ ನೀಡಿರುವುದು ಗುರುಗಳ ಚಿಂತನೆಗೆ ಮೆರುಗು ನೀಡಿದಂತೆ ಆಗಿದೆ.

ಕಳೆದ 25 ವರ್ಷಗಳಿಂದ ಯುವವಾಹಿನಿಯನ್ನು ಬಹಳ ಹತ್ತಿರದಿಂದ ನೋಡಿದ ನನಗೆ ಈ ಸಂಸ್ಥೆಯನ್ನು ಮುನ್ನಡೆಸಿದ 25 ಅಧ್ಯಕ್ಷರ ಒಡನಾಟ ಇದೆ. ಅವರೆಲ್ಲ ಅತ್ಯಂತ ಸಭ್ಯರು, ಸಮಾಧಾನಿಗಳು ಆಗಿರುತ್ತಾರೆ. ಅಂತೆಯೇ ಕ್ರಿಯಾತ್ಮಕ ಚಿಂತಕರು ಆಗಿದ್ದಾರೆ. ಯುವವಾಹಿನಿಯ ಇವತ್ತಿನ ಕೀರ್ತಿಗೆ ಅವರೆಲ್ಲರ ಶ್ರಮ ಮತ್ತು ಪ್ರಯತ್ನ ಖಂಡಿತ ಇದೆ. ಅವರನ್ನು ನಾನು ಮೊದಲ ಬಾರಿ ನೋಡಿದಾಗ ಅವರೆಲ್ಲ ಚಿಗುರು ಮೀಸೆಯ ಯುವಕರಾಗಿದ್ದರು. ಇವತ್ತು ಅವರೆಲ್ಲ ಬೆಳ್ಳಿ ಮೀಸೆಯ ಯುವಕರಾಗಿದ್ದಾರೆ. ಆದರೂ ಅದೇ ಉತ್ಸಾಹ, ಅದೇ ಚೈತನ್ಯದಿಂದ ಅವರು ಕಳೆದ ೨೫ ವರ್ಷಗಳಿಂದ ಕೇಂದ್ರ ಸಮಿತಿಯ ಮಾಸಿಕ ಸಭೆಗೆ ಹಾಜರಾಗುತ್ತಾರೆ. ಕೊನೆಯ ಸಾಲಿನಲ್ಲಿ ಕೂತು ಯುವಕರ ಸಭಾ ಕಲಾಪವನ್ನು ವೀಕ್ಷಿಸುತ್ತಾರೆ. ಹಳಿತಪ್ಪುವ ಸೂಚನೆ ಕಂಡರೆ ಎದ್ದು ನಿಂತು ಪುನಃ ಹಳಿಗೆ ತರುತ್ತಾರೆ. ಅವರ ಅನುಭವದ ಸಿಂಚನ ಯುವಕರಿಗೆ ದೊರೆಯುತ್ತದೆ. ಎಲ್ಲವು ಶಿಸ್ತುಬದ್ಧವಾಗಿ ಚರ್ಚೆಯಾಗಿ ಒಮ್ಮತದ ತೀರ್ಮಾನ ಆಗುತ್ತದೆ. ಕೆಲವೊಮ್ಮೆ ಚರ್ಚೆ ಬಿಸಿಯಾದಾಗ ಸಲಹೆಗಾರರ ತೀರ್ಮಾನಕ್ಕೆ ಬಿಡೋಣ ಎಂದು ತೀರ್ಮಾನವಾಗುತ್ತದೆ. ಆಗ ಸಲಹೆಗಾರರಿಗೆ ತಣ್ಣಗೆ ಬೆವರುತ್ತದೆ. ಅಧ್ಯಕ್ಷರ ಮಾತಿನ ಮೊದಲು ಸಲಹೆಗಾರರ ಮಾತು, ಸಲಹೆಗಾರರು ಎದ್ದು ನಿಂತರೆ ಸಭೆ ನೀರವಮೌನಕ್ಕೆ ಜಾರುತ್ತದೆ. ಕಿವಿ ನಿಮಿರಿಸಿ ಕೇಳುತ್ತಾರೆ. ಸಲಹೆಗಾರರ ತೀರ್ಮಾನವನ್ನು ವಿರೋಧಿಸಿದ ಸಂದರ್ಭಗಳೇ ಇಲ್ಲ. ಸ್ವಂತ ಹೆತ್ತವರ ಮಾತು ಕೇಳದ ಈ ಕಾಲದಲ್ಲಿ ಯುವವಾಹಿನಿಯವರು ಹಿರಿಯರ ಮಾತು ಕೇಳುತ್ತಾರೆಂದರೆ ಅದು ಅವರ ಸಂಸ್ಕೃತಿಗೆ ಹಿಡಿದ ಕನ್ನಡಿಯಲ್ಲವೇ? ೨೪ ವರ್ಷಗಳಿಂದ ಮಂಗಳೂರಿನ ಡಾನ್‌ಬಾಸ್ಕೊ ಹಾಲಿನಲ್ಲಿ ನಡೆಯುತ್ತಿದ್ದ ಯುವವಾಹಿನಿಯ ಸಭೆಗಳು ಈಗ ಕೊಟ್ಟಾರದಲ್ಲಿಯ ಸ್ವಂತ ಸಭಾಭವನದಲ್ಲಿ ನಡೆಯುತ್ತಿರುವುದು ಯುವವಾಹಿನಿಯ ಬೆಳವಣಿಗೆಯ ಸಂಕೇತವಾಗಿದೆ. ಯುವವಾಹಿನಿಗೂ ಕೆಟ್ಟ ದಿನಗಳು ಇರಲಿಲ್ಲ ಎಂದಲ್ಲ. ಅನೇಕ ಕೆಟ್ಟ ದಿನಗಳನ್ನು ಸಮಾಧಾನ ಚಿತ್ತದಿಂದ ಸಂಘರ್ಷ ರಹಿತವಾಗಿ ಗೆದ್ದ ಕೀರ್ತಿ ಯುವವಾಹಿನಿಯದು. ತಾತ್ವಿಕ ಭಿನ್ನಾಭಿಪ್ರಾಯಗಳಿಗೆ ವ್ಯಕ್ತಿಗಳನ್ನು ದ್ವೇಷಿಸುವುದು ಯುವವಾಹಿನಿಯ ಜಾಯಮಾನವಲ್ಲ – ಪ್ರೀತಿಯಿಂದ ಮಾತ್ರ ಒಗ್ಗಟ್ಟು ಮತ್ತು ಸಂಘಟನೆ ಬಲಗೊಳ್ಳುತ್ತದೆ ಎಂಬ ಸತ್ಯ ಇವರಿಗೆ ಗೊತ್ತು. ಯುವವಾಹಿನಿ ಒಂದು ಕೂಡು ಕುಟುಂಬದ ಭಾವನಾತ್ಮಕ ಸಂಬಂಧ ಹೊಂದಿದೆ ಇದನ್ನು ಇನ್ನಷ್ಟು ಬಲಗೊಳಿಸುವ ಅಗತ್ಯ ಇದೆ.

ಯುವವಾಹಿನಿ ಸಮಾಜ ಸೇವೆಯ ದೀಕ್ಷೆ ತೊಟ್ಟ ಯುವಕರ ಒಂದು ದಂಡು, ಅದು ಬೆಳೆದರೆ ಸಮಾಜಕ್ಕೆ ಒಳಿತು. ಅದು ಬೆಳೆದು ಸಮಾಜವನ್ನು ಬಲಪಡಿಸಬೇಕೆಂದು ಹಾರೈಸುತ್ತೇನೆ.

– ಬಿ. ತಮ್ಮಯ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!