ನಾರಾಯಣಗುರುಗಳು ಸಾರಿದ ಸಾರ್ವಕಾಲಿಕ ಮೌಲ್ಯಗಳು ನಿಜ ಅರ್ಥದಲ್ಲಿ ಅನುಷ್ಟಾನಕ್ಕೆ ಬರಲೇಬೇಕಾದ ತುರ್ತು ಇಂದಿನ ಸಮಾಜಕ್ಕಿದೆ. ಓರ್ವ ಸಾಧಕನ ನೆಲೆ ಮತ್ತು ಬೆಲೆಗಳೆರಡೂ ಮಹತ್ವ ಪಡೆದುಕೊಳ್ಳುವುದು ಆತನಿದ್ದ ಕಾಲಕ್ಕಿಂತಲೂ ಆತನಿಲ್ಲದ ಕಾಲದಲ್ಲಿ ಅದು ಕಾರ್ಯೋನ್ಮುಖ ಗೊಳ್ಳುವುದರಲ್ಲಿ. ತಾನಿಲ್ಲದ ಕಾಲದಲ್ಲಿ ತನ್ನಿರುವನ್ನು ಉಳಿಸಬೇಕಾದರೆ ಅವನ ಜೀವನ ಕ್ರಮ ಮತ್ತು ಸಾಧನೆಗಳು ಕಾಲಾತೀತವಾಗಿರಬೇಕು. ಈ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ವರ್ತಮಾನಕ್ಕೂ ಭವಿಷ್ಯದ ಎಲ್ಲಾ ತಲೆಮಾರುಗಳಿಗೂ ಪ್ರಸ್ತುತವೆನಿಸುವ ಸಾರ್ವಕಾಲಿಕ ದಾರ್ಶನಿಕರು. ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಎಮ್ ತುಂಬೆ ತಿಳಿಸಿದರು.
ಅವರು ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ, ಬಿ.ಸಿ.ರೋಡ್ ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲೆಯಲ್ಲಿ ಜರುಗಿದ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾಜೇಶ್ ಬಿ ಸಮಾರಂಭ ಉದ್ಘಾಟಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ಸಮಾರಂಭ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಉಮೇಶ್ ಸುವರ್ಣ ತುಂಬೆ, ಬಂಟ್ವಾಳ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ, ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ನಾಗೇಶ್ ಪೂಜಾರಿ ನೈಬೇಲು, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ನಾಗೇಶ್ ಏಲಾಬೆ, ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲೆಯ ಮೇಲ್ವಿಚಾರಕರಾದ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು, ಸಿಹಿ ತಿಂಡಿ ಹಾಗೂ ಶಾಲಾ ಸಾಮಗ್ರಿಗಳನ್ನು ವಿತರಿಸಲಾಯಿತು. ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಬಿ.ಶ್ರೀಧರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ ಧನ್ಯವಾದ ನೀಡಿದರು.