ಮುದ್ದು ಮೂಡು ಬೆಳ್ಳೆ -ರಜತ ರಶ್ಮಿ -2012

ದಿ| ವಿಶುಕುಮಾರ್ : ಬದುಕು-ಸಾಧನೆ

ಕರಾವಳಿ ಕಂಡ ಧೀಮಂತ ಪ್ರತಿಭಾಶಾಲಿಗಳ ಸಾಲಿನ ಮಿನುಗು ನಕ್ಷತ್ರವಾದ ವಿಶುಕುಮಾರ್ ದಂತಕತೆಯಾದ ವ್ಯಕ್ತಿ. ತುಳುವಿನ ಉಸಿರು, ಕನ್ನಡದ ಶಕ್ತಿ, ಸಮಾಜದ ಸ್ಫೂರ್ತಿ, ಚೆಲುವಿನ ಮೂರ್ತಿಯಾಗಿದ್ದ ವಿಶುಕುಮಾರ್ ಒಂದು ಕಾಲದ ಪ್ರತಿಭಾವಂತ ನಟ, ನಿರ್ದೇಶಕ, ಕಾದಂಬರಿಕಾರ, ಪತ್ರಕರ್ತ, ಸಂಘಟಕ, ಸಿನಿಮಾ ನಿರ್ದೇಶಕರಾಗಿ, ಶ್ರೇಷ್ಠ ಸಾಧನೆಗಳನ್ನು ಮಾಡಿದವರು, ಇನ್ನೆಷ್ಟೋ ಉಪಯುಕ್ತ ಕೊಡುಗೆಗಳನ್ನು ನೀಡಲಿರುವ ಭರವಸೆಯ ಅಕಾಲದಲ್ಲೇ ಅಗಲಿ ಹೋದವರು.

1797 ರಲ್ಲಿ ಟಿಪ್ಪುಸುಲ್ತಾನ್ ಸಮರ ಕಾಲದಲ್ಲಿ ಮಂಗಳೂರು ಬೋಳೂರಿನ ಕಡಲತೀರದಲ್ಲಿ ಕಟ್ಟಿಸಿದ ಕೋಟೆ ಸುಲ್ತಾನ್ ಬತ್ತೇರಿ, ಇಂದು ಪ್ರವಾಸಿಗರ ರಮ್ಯ ತಾಣ, ಅದರ ಸುತ್ತ ಆವರಿಸಿಕೊಂಡು ಪ್ರವೇಶಿಸುವ ನದಿಕವಲು ಎಲ್ಲೆಲ್ಲೂ ಹಚ್ಚ ಹಸಿರ ತೆಂಗಿನತೋಟ ಬತ್ತೇರಿಯ ಪೂರ್ವ ಅಂಚಿನಲ್ಲಿ ’ನಿಸರ್ಗ’ ಎಂಬ ಸಣ್ಣ ಹೋಟೆಲು ಅದರ ಮಾಲಕರಾದ ಬೋಳೂರು ದೋಗ್ರಪೂಜಾರಿ-ಚಂದ್ರಾವತಿ ದಂಪತಿಗಳ ಹಿರಿಯ ಮಗನೇ ವಿಶ್ವನಾಥ ಬೋಳೂರು, ಮುಂದೆ ಸಾಹಿತಿ ಕಲಾವಿದನಾದಾಗ ’ವಿಶುಕುಮಾರ್’ ಆದರು. ಜನಿಸಿದ್ದು 1937 ರ ಮಾರ್ಚ್ 4 ರಂದು ಮನೆಯಲ್ಲಿ ತಂದೆಯ ಯಕ್ಷಗಾನ ಹವ್ಯಾಸಿ ತಂಡ, ಅದರ ಚಂಡೆ, ಮದ್ದಳೆ, ಭಾಗವತಿಕೆಯ ಅನುರಣನ, ವಿಶಾಲವಾಗಿ ಹಬ್ಬಿರುವ ಹೊಳೆಯ ತುಂಬ ಹತ್ತಾರು ದೋಣಿಗಳು. ಅಲ್ಲಲ್ಲಿ ಬಲೆಬೀಸುವ, ಮೀನು ಹಿಡಿಯುವ ಬೆಸ್ತರು, ಕಣ್ಣಂಚಿನ ಆ ಕಡೆ ಅಬ್ಬರಿಸುವ ಕಡಲು ಇಂತಹ ಜೀವಂತಿಕೆಯ ಹಿನ್ನಲೆಯುಳ್ಳ ಪರಿಸರದಲ್ಲಿ ವಿಶುಕುಮಾರ್ ಬಾಲ್ಯ ಕಳೆದು ಉತ್ಸಾಹ, ಸೃಜನಶೀಲತೆ ಕುಡಿಯೊಡೆಯಿತು. ಅವರ ಬೆನ್ನಲ್ಲಿ ಹುಟ್ಟಿದ ಮಧುಕುಮಾರ್, ಪುರುಷೋತ್ತಮ, ದಾಮೋದರ ನಿಸರ್ಗ, ಯದುವೀರ, ದೇವೇಂದ್ರ ಎನ್ನುವ ತಮ್ಮಂದಿರು, ವೇದಾವತಿ, ಉಮಾವತಿ, ಸುಗಂಧಿ, ಸುಮತಿ ನಾಲ್ವರು ಸಹೋದರಿಯರು ಇಂತಹ ತುಂಬು ಮನೆಯ ಹಿರಿಯಣ್ಣ ವಿಶುಕುಮಾರ್ ಗುಣನಡತೆಯಲ್ಲಿ ಪ್ರೀತಿ- ಪ್ರೇಮದಲ್ಲಿ ಪ್ರತಿಭೆಯಲ್ಲೂ ಹಿರಿತನವನ್ನೇ ಮೆರೆದವರು.

1943 ರಲ್ಲಿ ವಿಶುಕುಮಾರ್ ಮಂಗಳೂರು ಉರ್ವದ ’ಸಿದ್ಧಿಶಾಲೆ’ ಗೆ ಸೇರ್ಪಡೆಗೊಂಡರು. ಬೊಕ್ಕಪಟ್ನ ಸರಕಾರಿ ಶಾಲೆ (ಈಗ ಪದವಿ ಪೂರ್ವ ಕಾಲೇಜ್) ಯಲ್ಲಿ ಇ.ಎಸ್. ಎಲ್.ಸಿ. ಉತ್ತೀರ್ಣರಾಗಿ, ಉರ್ವದ ಕೆನರಾ ಪ್ರೌಢಶಾಯಲ್ಲಿ 1954 ರಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿದರು. ಉಚ್ಚಶಿಕ್ಷಣದ ಹಂಬಲವಿದ್ದರೂ ಯಕ್ಷಗಾನ ಮೇಳದ ಯಜಮಾನರಾದ ತಂದೆ ದೋಗ್ರ ಪೂಜಾರಿಯವರಿಗೆ ಅದಾಗಲೇ ದೊಡ್ಡಸಂಸಾರ, ಕಲಾವಿದರನ್ನು ಆದರಿಸುವ ಭಾರದಿಂದ ಆರ್ಥಿಕ ಸಂಕಷ್ಟವೇ ಇದ್ದುದರಿಂದ, ಮನೆಯ ಹಿರಿಮಗನಾಗಿ ಕೂಡಲೇ ನೌಕರಿಗೆ ಸೇರುವ ಅಗತ್ಯವಿತ್ತು. ವಿಶುಕುಮಾರ್ ಹಂಚಿನ ಕಾರ್ಖಾನೆಯೊಂದರಲ್ಲಿ ನೌಕರಿಗೆ ಸೇರಿ ಮೂರುವರ್ಷ ದುಡಿದು, 1957ರಲ್ಲಿ ಸರಕಾರಿ ನೌಕರಿ ದೊರೆತು, ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯಲ್ಲಿ ಎಂಡೋಮೆಂಟ್ ಇನ್ಸ್‌ಪೆಕ್ಟರ್ ಆಗಿ ಸೇರಿದರು. 1977 ರವರೆಗೆ ಇಪ್ಪತ್ತು ವರ್ಷ ಆ ಹುದ್ದೆಯಲ್ಲಿದ್ದು ’ಕೋಟಿಚೆನ್ನಯ’ ತುಳುಚಿತ್ರ ನಿರ್ದೇಶನದ ವೇಳೆಗೆ ನೌಕರಿಗೆ ರಾಜಿನಾಮೆ ಇತ್ತರು. ಅದೇ ವರ್ಷವೇ ಆ ಚಿತ್ರ ನಿರ್ದೇಶನಕ್ಕಾಗಿ ಅವರಿಗೆ ರಾಜ್ಯಪ್ರಶಸ್ತಿಯೂ ಬಂತು.

ಉರ್ವದ ಕೆನರಾ ಪೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗಲೇ ನಾಟಕ ಬರೆದು ವಾರ್ಷಿಕೋತ್ಸವದಂದು ಅಭಿನಯಿಸಿ ಗುರುಗಳಿಂದ ಮೆಚ್ಚುಗೆ ಗಳಿಸಿದರು. ’ಶಕುಂತಳಾ ದುಷ್ಯಂತೆ’ ’ಮಿಸ್ಟರ್ ಬಾಂಬೆ’ ಇವು ಅವರ ವಿದ್ಯಾರ್ಥಿ ಜೀವನದ ನಾಟಕಗಳು ಮುಂದೆ ಕುರುಕ್ಷೇತ್ರ, ಗರ್ವದ ಎಣ್ಣೆ, ಕೋಟಿಚೆನ್ನಯ ತುಳುನಾಟಕಗಳನ್ನೂ ಕನ್ನಡದಲ್ಲಿ ’ಬಲಾತ್ಕಾರದ ಬಯಲಲ್ಲಿ, ಮನೆಯಿಂದ ಮಸಣಕ್ಕೆ, ’ಪ್ರಥ್ವಿರಾಜ್’ ’ಮಿಯಾಂ ಕಾಮತ್’, ಡೊಂಕುಬಾಲದ ನಾಯಕರು’ ’ಅಸ್ತಮಾನ’, ’ಹೆಗಲಿಗೆ ಹೆಗಲು’, ಕುರುಕ್ಷೇತ್ರ’ (ಕನ್ನಡ), ರಾಜದ್ರೋಹಿ, ’ತರಂಗ ತರಂಗ ಅಂತರಂಗ’ ಮುಂತಾದ 11 ಕನ್ನಡ ನಾಟಕಗಳನ್ನು ಬರೆದು ದಿಗ್ದರ್ಶಿಸಿ, ಪ್ರಯೋಗಿಸಿದರು. ಅವರ ನಾಟಕಗಳೆಲ್ಲ ಸಾಮಾಜಿಕ ಅಸಮಾನತೆಯ ವಿರುದ್ಧ ಪ್ರತಿಭಟನೆಯ ಕಥಾವಸ್ತುವಿನವು. ಅವುಗಳಲ್ಲಿ ಪ್ರಮುಖವಾದ ಚಾರಿತ್ರಿಕ ನಾಟಕ ’ಕೋಟಿಚೆನ್ನಯ’ ಮುಂದೆ 1972 ರಲ್ಲಿ ಚಲನಚಿತ್ರವಾಗಿ ಇತಿಹಾಸ ನಿರ್ಮಿಸಿತು.

ಮಣ್ಣಗುಡ್ಡೆಯಲ್ಲಿ ’ನವೋದಯ ಕಲಾವೃಂದ’ ಎನ್ನುವ ನಾಟಕ ತಂಡವನ್ನು ಅವರು ಹುಟ್ಟುಹಾಕಿದರು. ಅದರ ಮೂಲಕ ಪ್ರಯೋಗಿಸಿದ ನಾಟಕ ’ಮನೆಯಿಂದ ಮಸಣಕ್ಕೆ’ ತುಂಬ ಯಶಸ್ವಿ ಪ್ರಯೋಗ. ಅರ್‍ವತ್ತರ ದಶಕದ ದ.ಕ. ಜಿಲ್ಲಾ ಖ್ಯಾತನಾಮರಾದ ಬೇಲಗದ್ದೆ ಅಪ್ಪಯ್ಯ, ರಮಾನಂದ ಚೂರ್ಯ, ಕೆಮ್ಮೂರು ದೊಡ್ಡಣ್ಣ ಶೆಟ್ಟರಂತಹ ನಾಟಕಕಾರರ ಜೊತೆಯಲ್ಲೂ ಆರಂಭದಲ್ಲಿ ಅವರು ಕೆಲಸ ಮಾಡಿದ್ದರು. ಮುಂದೆ ಎಂಭತ್ತರ ದಶಕದಲ್ಲಿ ’ಡೊಂಕು ಬಾಲದ ನಾಯಕರು’ ನಾಟಕದ ಮೂಲಕ ಕರ್ನಾಟಕದಾದ್ಯಂತ ಗಮನ ಸೆಳೆಯಲ್ಪಟ್ಟರು. ಆಳುವ ಸರಕಾರದ ಕೆಂಗಣ್ಣಿಗೂ ಗುರಿಯಾದರು. ಮಾಜಿ ಕೇಂದ್ರ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ, ದಿ| ಸೋಮಶೇಖರ ಪುತ್ರನ್, ಏಕಾನಂದ ಮಾಸ್ಟರ್, ಬಿ.ಎನ್.ರಾವ್, ವಾಮನ್‌ರಾಜ್ ಮಂತಾದವರೆಲ್ಲ ತಮ್ಮ ಹೈಸ್ಕೂಲ್ ಶಿಕ್ಷಣದ ವೇಳೆ ವಿಶುಕುಮಾರರ ನಾಟಕಗಳಲ್ಲಿ ಪಾತ್ರವಹಿಸಿದ್ದರಂತೆ. ನಾಟಕವಲ್ಲದೆ ಯಕ್ಷಗಾನ ಮತ್ತು ಚಿತ್ರಕಲೆಯಲ್ಲಿಯೂ ವಿಶುಕುಮಾರ್‌ರಿಗೆ ಒಳ್ಳೆಯ ಅಭಿರುಚಿಯಿತ್ತು. ಅನೇಕ ಸಣ್ಣ ಕತೆಗಳನ್ನು ಶಾಲಾಜೀವನದಲ್ಲಿ ಅವರು ಬರೆದಿದ್ದರು. ಎಂಭತ್ತರ ದಶಕದಲ್ಲಿ ವಿಶುಕುಮಾರರ ’ಕುಸುಮ ಕೀರ್ತನೆ’ ಎನ್ನುವ ಕಥಾಸಂಕಲನವೂ ಪ್ರಕಟಗೊಂಡಿತು.
’ಕೋಟಿಚೆನ್ನಯ’, ಕರಾವಳಿ, ಮದರ್, ಅಖಂಡ ಬ್ರಹ್ಮಚಾರಿಗಳು ಚಲನಚಿತ್ರಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ರಚಿಸಿ ನಿರ್ದೇಶಿಸಿದ ವಿಶುಕುಮಾರ್ ’ಸಂಘರ್ಷ’ (ಮಾವಿನ ಕೆರೆ ರಂಗನಾಥನ್) ಎನ್ನುವ ಚಿತ್ರದ ಮೂಲಕ ನಟಿಸಿ ಮುಂದೆಯೂ ಹಲವು ಚಿತ್ರಗಳಲ್ಲಿ ನಟಿಸಿದರೂ ’ಕರಾವಳಿ’ ಚಿತ್ರದ ಸಂಜೀವ ಸುವರ್ಣ ಅವರ ಅಮೋಘ ಅಭಿನಯದ ಅಪ್ಪಟ ಚಿತ್ರ.

ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಹೆಸರಾಂತ ಕಾದಂಬರಿಕಾರ. ೭೦-೮೦ರ ದಶಕದಲ್ಲಿ ಪ್ರಕಟವಾದ ಅವರ 14 ಕಾದಂಬರಿಗಳು ನೆತ್ತರಗಾನ, ಭಗವಂತನ ಆತ್ಮಕತೆ, ಗಗನಗಾಮಿಗಳು, ಮಿಯಾಂ ಕಾಮತ್, ಕರಾವಳಿ, ಮದರ್, ಹಂಸಕ್ಷೀರ, ವಿಪ್ಲವ, ಭೂಮಿ, ಮಥನ, ಈ ಪರಿಯ ಬದುಕು, ಭಟ್ಕಳದಿಂದ ಬೆಂಗಳೂರಿಗೆ, ಕಪ್ಪುಸಮುದ್ರ ಹಾಗೂ ಪ್ರಜೆಗಳು ಪ್ರಭುಗಳು ಪುಸ್ತಕ ರೂಪದಲ್ಲಿ ಬರುವ ಮೊದಲು ಹೆಚ್ಚಿನವು ಕನ್ನಡ ಪ್ರಭ, ಪ್ರಜಾಪ್ರಭುತ್ವ, ತರಂಗ ಮುಂತಾದ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ಮೂರು ಕಾದಂಬರಿಗಳು (ಜೊತೆಗೆ ತುಳುವಿನ ಕೋಟಿಚೆನ್ನಯ) ಸೇರಿದಂತೆ ಚಲನಚಿತ್ರಗಳಾಗಿವೆ. ಕೆಲವು ಕೃತಿಗಳು, ಚಲನಚಿತ್ರಗಳು ವಿವಾದಗಳನ್ನು ಹುಟ್ಟಿಸಿದವು, ಪ್ರಶಸ್ತಿಗಳನ್ನೂ ಪಡೆದುಕೊಂಡವು.

ಯಕ್ಷಗಾನ ಕಲಾವಿದರ ಖಾಸಗಿ ಬದುಕು, ಬವಣೆಗಳ ಕುರಿತು ’ಬಣ್ಣದ ಮಾಲಿಂಗ’ ಎನ್ನುವ ಕೃತಿಯ ಬಳಿಕ ಎರಡನೆಯದಾಗಿ ಬಂದಿರುವ ಕಾದಂಬರಿಯೇ ವಿಶುಕುಮಾರರ ’ನೆತ್ತರಗಾನ’. ಭಿನ್ನ ದೃಷ್ಟಿಕೋನದಿಂದ ರಚನೆಗೊಂಡ ಕೃತಿ. ಮೇಳ ಸಂಚಾರದ ಆರು ತಿಂಗಳ ಸಂಪಾದನೆಯಲ್ಲಿ ವರ್ಷ ಪೂರ್ತಿ ಸಂಸಾರ ನಿಭಾಯಿಸಬೇಕಾದ ಕಲಾವಿದರ ಬವಣೆ, ರಂಗಸ್ಥಳದ ರಾಜ ಮಹಾಜನರು ರಂಗದಿಂದ ನಿರ್ಗಮಿಸಿದ ಮೇಲೆ ಹರೆಯ ಕುಂದಿದಾಗಿನ ದುಸ್ಥಿತಿ, ಮೇಳದ ದುಡಿಮೆ, ಶೋಷಣೆ, ದೌರ್ಬಲ್ಯಗಳ ರೋಚಕ ನಿರೂಪಣೆಯೊಂದಿಗೆ, ಯಕ್ಷಗಾನ ಕಲೆಯನ್ನು ಎತ್ತರಕ್ಕೊಯ್ಯುವ ಆಶಯ ನೆತ್ತರಗಾನದ ಹೂರಣ. ಅವರ ಕರಾವಳಿ, ಮದರ್, ಕರ್ಮ, ಭೂಮಿ,ಮಥನ ಮುಂತಾದ ಕಾದಂಬರಿಗಳು ಹೆಚ್ಚು ಚರ್ಚೆಗೆ ಒಳಗಾಗಿ ಆ ಮೂಲಕ ಬಹಳಷ್ಟು ಓದುಗರನ್ನೂ ಗಳಿಸಿಕೊಂಡವು. ಕರಾವಳಿ, ಮದರ್ ಕಾದಂಬರಿಗಳು ಅಂತರ್ಜಾತಿ ಪ್ರೇಮ ಮತ್ತು ಸೌಹಾರ್ದದ ಕರೆಯಿತ್ತರೆ ’ಭಗವಂತನ ಆತ್ಮಕತೆ’ ಕಳ್ಳಸಾಗಾಣಿಕೆ ಜಾಲದ ಬಗ್ಗೆ ಬೆಳಕು ಚೆಲ್ಲಿದ ಕೃತಿ. ’ಭಟ್ಕಳದಿಂದ ಬೆಂಗಳೂರಿಗೆ’ ತುಂಬ ಕುತೂಹಲಕಾರಿ ಕಾದಂಬರಿ. ಅವರು ತನ್ನ ಜೀವಿತದ ಕೊನೆಯ ವರ್ಷಗಳಲ್ಲಿ ಬರೆದು ’ತರಂಗ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡ ’ಕಪ್ಪುಸಮುದ್ರ’ ಕೂಡಾ ಅಂಥದೇ ಕಥಾವಸ್ತುವಿನ ಸಂಕೀರ್ಣ ತಿರುವುಗಳ ಕ್ಲೈಮ್ಯಾಕ್ಸ್ ಹೊಂದಿರುವ ಕಾದಂಬರಿ.

’ಪ್ರಜೆಗಳು ಪ್ರಭುಗಳು’ ಎಂಭತ್ತರ ದಶಕದಲ್ಲಿ ವಿಶುಕುಮಾರರು ಬರೆದ ರಾಜಕೀಯ ವಿಡಂಬನಾ ಕಾದಂಬರಿ. ಸರಕಾರದ ಲೋಪದೋಷಗಳನ್ನು ನೇರಪಾತ್ರಗಳ ಮೂಲಕ ಎದುರಿಗಿಟ್ಟ ಛಾತಿ, ಸಾಹಸಿ ಪ್ರವೃತ್ತಿ ಅವರದು. ಭೂಮಸೂದೆ ಜಾರಿಯಿಂದಾಗಿ ಕರಾವಳಿ ಜಿಲ್ಲೆಯಲ್ಲುಂಟಾದ ಸಾಮಾಜಿಕ ವರ್ಗಸಂಘರ್ಷ ಸ್ಥಿತಿಯಲ್ಲಿ ಜವಾಬ್ದಾರಿಯುತವಾಗಿ ಸ್ಪಂದಿಸಿ ಸಾಮಾಜಿಕ ನ್ಯಾಯದ ಅಂಶಗಳನ್ನು ನೈಜವಾಗಿ ಕಟ್ಟಿಕೊಟ್ಟ ಕಿರುಕಾದಂಬರಿ ’ಭೂಮಿ’ 1977 ರಲ್ಲಿ ಪ್ರಕಟವಾಗಿದ್ದು ವಸ್ತುವಿನ ದೃಷ್ಠಿಯಿಂದ ಅವರ ಮಹತ್ವದ ಕೊಡುಗೆಗಳಲ್ಲೊಂದು. ’ಕರಾವಳಿಯ’ ಸಂಜೀವ ಸುವರ್ಣ, ಹಸನಬ್ಬ, ಹಂಸ, ಪದ್ಮ, ಮದರ್ ಕಾದಂಬರಿಯ ಸಿಸ್ಟರ್, ಭೂಮಿಯ ಪಂಜು-ವೆಂಕಮ್ಮ, ನಾಗಿ-ಭಾಗಿ ಮುಂತಾದ ಪಾತ್ರಗಳು ಒಂದಿಲ್ಲೊಂದು ಬಗೆಯಲ್ಲಿ ಓದುಗರನ್ನು ತಟ್ಟಿ ಗಟ್ಟಿಯಾದವುಗಳು. ಒಟ್ಟಿನಲ್ಲಿ ತನ್ನ ಕಾಲದ ಸಾಮಾಜಿಕ ಸಂಘರ್ಷಗಳನ್ನು ತನ್ನ ಸಾಹಿತ್ಯ ರಚನೆ, ರಂಗಭೂಮಿ, ಕಲಾಪ್ರದರ್ಶನ, ಸಂಘಟನೆ, ಪತ್ರಿಕೋದ್ಯಮ ಮುಂತಾಗಿ ಹೆಜ್ಜೆಯಿಟ್ಟಲ್ಲೆಲ್ಲ ಅವರದು ದೃಢವಾದ ಗುರುತು.

ಬೆಂಗಳೂರಿನಲ್ಲಿ ನೆಲೆನಿಂತ ಮೇಲೆ 1980 ರಲ್ಲಿ ಅವರು ಬೆಂಗಳೂರು ತುಳುಕೂಟದ ಅಧ್ಯಕ್ಷರು ತುಳುವಿನ ಏಳಿಗೆ ಪ್ರಚಾರಕ್ಕಾಗಿ ಅಲ್ಲಿನ ಪ್ರಮುಖರನ್ನೆಲ್ಲ ಭೇಟಿಯಾಗಿ ೧೯೮೩ರಲ್ಲಿ ಬೆಂಗಳೂರಿನಲ್ಲಿ ಎರಡು ದಿನಗಳ ಅವಧಿಯ ಪ್ರಥಮ ಅಖಿಲಭಾರತ ತುಳು ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಕು.ಶಿ. ಹರಿದಾಸ ಭಟ್ಟರ ಅಧ್ಯಕ್ಷತೆಯಲ್ಲಿ ನಡೆಸಿದರು. ಅಂದಿನ ತನ್ನ ಸಂಪಾದಕತ್ವದ ’ಪೊರ್ಲು’ ಸ್ಮರಣಸಂಚಿಕೆಯಲ್ಲಿ ಅವರು ಬರೆದ ಸಾಲುಗಳು, ’ಎಂಕ್ಲೆ ಕಡಲ್ ತುಳು, ಮಡಲ್ ತುಳು, ಎಂಕ್ಲೆ ಉಸುಲು ತುಳು.’ ಹೀಗೆಯೇ ಬೆಂಗಳೂರು ಬಿಲ್ಲವ ಎಸೋಸಿಯೇಶನ್ ಆಶ್ರಯದಲ್ಲಿ 1981 ರಲ್ಲಿ ವಿಶುಕುಮಾರರು ಏರ್ಪಡಿಸಿದ ತುಳುವರ ವೈಭವ’ ಅಲ್ಲಿನ ತುಳುವರ ಕಣ್ತೆರೆಸಿದ ಉತ್ತುಂಗ ಪ್ರದರ್ಶನವಾಗಿತ್ತು. ಅದೇ ಕಾಲಕ್ಕೆ ಮಂಗಳೂರಿನಲ್ಲಿ ದಿ. ದಾಮೋದರ ಆರ್. ಸುವರ್ಣರ ನೇತೃತ್ವದಲ್ಲಿ ದ.ಕ. ಜಿಲ್ಲಾ ನಾಟಕ ಕಲಾವಿದರ ಸಂಘಟನಾ ಯೋಜನೆಯಲ್ಲೂ ವಿಶುಕುಮಾರ್ ಬಂದು ಸ್ಪಷ್ಟ ಮಾರ್ಗಸೂಚಿ ನೀಡಿ ಹೋದರು.

ಬಿಲ್ಲವ ಎಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಬೆಂಗಳೂರಿನ ಆರ್ಯ ಈಡಿಗ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದರು. ಹಿಂದುಳಿದ ವರ್ಗಗಳ ಚಿರಸ್ಮರಣೀಯ ದೇವರಾಜ ಅರಸು ಮತ್ತು ಹಿಂದುಳಿದ ವರ್ಗಗಳ ದ್ವಿತೀಯ ಆಯೋಗದ ಅಧ್ಯಕ್ಷ ಎಲ್.ಜಿ. ಹಾವನೂರರ ನೇತೃತ್ವದಲ್ಲಿ ನಡೆದ ’ಹಿಂದುಳಿದ ವರ್ಗಗಳ ಹೋರಾಟದಲ್ಲೂ ಸಕ್ರೀಯವಾಗಿ ದುಡಿದವರು. ಇವರ ಕರ್ತೃತ್ವ ಶಕ್ತಿಯ ಪರಿಚಯವಿದ್ದ ಬಂಗಾರಪ್ಪ, ರಾಮಕೃಷ್ಣ ಹೆಗಡೆಯರಾದಿ ಮುಖ್ಯಮಂತ್ರಿಗಳೆಲ್ಲ ಅವರ ಸ್ನೇಹವಲಯದಲ್ಲಿದ್ದರು. ೧೯೮೩ರಲ್ಲೊಮ್ಮೆ ಅಲ್ಪಕಾಲ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ವಿಶುಕುಮಾರ್ ಗೋಡಂಬಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಆದರೆ ಅವರು ಯಾರದೇ ಹಂಗಿನಲ್ಲೂ ಮುಲಾಜಿನಲ್ಲೂ ಇರುವ ವ್ಯಕ್ತಿಯಾಗಿರಲಿಲ್ಲ, ರಾಜೀನಾಮೆಯಿತ್ತರು.

ಸಮಸ್ಯೆಗಳನ್ನು ಮೇಲೆಳೆದುಕೊಂಡೇ ಎದುರಿಸುತ್ತಲೇ ಸಾಗಿದ ದಾರಿಯಲ್ಲಿ ವಿವಾಹದ ಬಗ್ಗೆ ಯೋಚನೆಯಿರಲಿಲ್ಲ. ಅದಾದುದ್ದು ಒಂದಿಷ್ಡು ತಡವಾಗಿಯೇ, 1984 ರಲ್ಲಿ ಬೆಂಗಳೂರಿನ ನ್ಯಾಯವಾದಿ ವಿಜಯಲಕ್ಷ್ಮಿಯವರೊಂದಿಗೆ ಸರಳ ವಿವಾಹ, 1985ರಲ್ಲಿ ಗಂಟಲ ಕ್ಯಾನ್ಸರ್ ಗೋಚರಿಸಿ ಸಾಲ ಸೋಲ ಮಾಡಿ ಸರಕಾರದ ಸಹಾಯದ ನಿರೀಕ್ಷೆಯಲ್ಲಿ 1986 ರಲ್ಲಿ ಲಂಡನ್‌ಗೆ ಚಿಕಿತ್ಸೆಗೆಂದು ತೆರಳಿ ರೂ. ಹದಿನೈದು ಸಾವಿರಕ್ಕೆ ಸೀಮಿತಗೊಂಡ ಸರಕಾರಿ ಸಹಾಯ, ಫಲಕಾರಿಯಾಗದ ಚಿಕಿತ್ಸೆ, ಮರುಮಾಸದಲ್ಲಿ ಬೆಂಗಳೂರಿಗೆ ಹಿಂತಿರುಗಿ ಅಕ್ಟೋಬರ್ 86 ರಲ್ಲಿ ಅವರು ತನ್ನ 49ರ ಹರೆಯದಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲಿ ತೀರಿಕೊಂಡಾಗ ಅವರ ಮಗು ಏಳು ತಿಂಗಳ ಹಸುಗೂಸು.

1984 ರಲ್ಲಿ ದಾವಣಗೆರೆಯಲ್ಲಿ ’ತರಂಗರಂಗ’ ಏರ್ಪಡಿಸಿದ ಕಾದಂಬರಿ ಸ್ಪರ್ಧೆಯಲ್ಲಿ ’ಕಪ್ಪುಸಮುದ್ರ’ ಕ್ಕೆ ಪಡೆದುಕೊಂಡ ಪ್ರಶಸ್ತಿಯೇ ವಿಶುಕುಮಾರ್ ಸ್ವೀಕರಿಸಿದ ಕೊನೆಯ ಪುರಸ್ಕಾರ. ಕೊನೆಗೂ ಮನಸ್ಸನ್ನು ಕಲ್ಲುಮಾಡಿಕೊಂಡ ಪತ್ನಿ ವಿಜಯಲಕ್ಷ್ಮಿ ಪತಿಯ ಮರಣಾನಂತರ ಅವರ ಇಚ್ಚೆಯಂತೆ ’ಪ್ರಜೆಗಳು ಪ್ರಭುಗಳು’ ಕಾದಂಬರಿಯನ್ನು ಚಲನಚಿತ್ರವಾಗಿಸಿದರು. ಅದು ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಅವರ ಸಹೋದರರಲ್ಲಿ ಮಧುಕುಮಾರ್ ಯಕ್ಷಗಾನ ಪ್ರಸಂಗಕರ್ತರಾಗಿ ಹೆಸರು ಮಾಡಿದ್ದರೆ, ಇನ್ನೋರ್ವ ತಮ್ಮನಾದ ಶ್ರೀ ದಾಮೋದರ ನಿಸರ್ಗ ಸಾಮಾಜಿಕ ಸೇವೆಯಲ್ಲಿ ಕ್ರಿಯಾಶೀಲರಾಗಿ ಮಂಗಳೂರು ತುಳುಕೂಟದ ಅಧ್ಯಕ್ಷರಾಗಿರುವುದಲ್ಲದೇ ಹಲವು ವರ್ಷ ಗೋಕರ್ಣನಾಥ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ವಿಶುಕುಮಾರರ ’ಕೋಟಿಚೆನ್ನಯ’ ತುಳುನಾಟಕದ ಪ್ರಥಮ ಪ್ರಯೋಗವಾದುದು ಮುಂಬಯಿಯ ಬಾಗ್ವಾಡಿ ಥಿಯೇಟರಿನಲ್ಲಿ 1963ರಲ್ಲಿ. ಅವರು ವಿಧಿವಶರಾದಾಗ ಮಂಗಳೂರು ಆಕಾಶವಾಣಿಯಿಂದ (ಇದೇ ಲೇಖನದಿಂದ) ಶ್ರದ್ಧಾಂಜಲಿ ಪ್ರಸಾರಗೊಂಡಿತು. ಮುಂದೆ ವಿ.ವಿ. ಪ್ರಸಾರಾಂಗದ ಆಶ್ರಯದಲ್ಲಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ವಿಶುಕುಮಾರ್ ಸಂಸ್ಮರಣ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಹಾಗೆಯೇ ಮುಂಬಯಿಯಲ್ಲಿ ಬಿಲ್ಲವರ ಎಸೋಸಿಯೇಶನ್ ವಿಶುಕುಮಾರ್ ಸಂಸ್ಮರಣ ಕಾರ್ಯಕ್ರಮ ಏರ್ಪಡಿಸಿತು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಡಾ. ವಿವೇಕ ರೈ ಅಧ್ಯಕ್ಷರಾಗಿದ್ದಾಗ 1997 ರಲ್ಲಿ ವಿಶುಕುಮಾರ್ ಕುರಿತು ತುಳು ಕೃತಿ (ಲೇ.ಬಿ.ಮಾಧವಕುಲಾಲ್) ಪ್ರಕಟಿಸಿತು.

ವಿಶ್ವ ಕನ್ನಡ ಮೇಳ ಸಂದರ್ಭದಲ್ಲಿ ಸರಕಾರ ವಿಶುಕುಮಾರರ ’ಕರಾವಳಿ’ ಕಾದಂಬರಿಯನ್ನು ಮರುಮುದ್ರಣ ಮಾಡಿಸಿತು. ಮುಂದೆ ’ಕರ್ಮ’ ಡಾ| ಗಣೇಶ ಅಮೀನ್‌ರಿಂದ ತುಳುವಿಗೆ ಅನುವಾದಗೊಂಡಿತು. ಸಾಹಿತ್ಯಾಸಕ್ತರ ಪ್ರೇರಣೆಯಿಂದ ಮಂಗಳೂರಿನ ಯುವವಾಹಿನಿ ಸಂಸ್ಥೆ ಅವರ ನೆನಪನ್ನು ಶಾಶ್ವತಗೊಳಿಸುವ ನೆಲೆಯಲ್ಲಿ 2003 ರಲ್ಲಿ ’ವಿಶುಕುಮಾರ್ ಪ್ರಶಸ್ತಿ’ಯನ್ನು ಸ್ಥಾಪಿಸಿ ಪ್ರತಿವರ್ಷ ವಿಶುಕುಮಾರ್ ಸಂಸ್ಮರಣ ಕಾರ್ಯಕ್ರಮ ನಡೆಸುತ್ತಾ ಸಾಧಕರಿಗೆ ಪ್ರಶಸ್ತಿ ನೀಡುವ ಸಾರ್ಥಕ ಯತ್ನವೊಂದನ್ನು ಮಾಡಿದೆ. ರಜತ ಸಂಭ್ರಮದಲ್ಲಿರುವ ಯುವವಾಹಿನಿಗೆ ಈ ಬಾರಿ ವಿಶುಕುಮಾರ್ ಪ್ರಶಸ್ತಿಯ ದಶಮಾನೋತ್ಸವದ ಸಾಧನೆಯ ಮೆರುಗು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!