ನ. 20 ರಂದು ಬೆಳ್ತಂಗಡಿ ಆಶಾ ಸಾಲಿಯಾನ್ ಕಲ್ಯಾಣ ಮಂಟಪದ ದಿ| ಶ್ರೀಮತಿ ಮುತ್ತಕ್ಕೆ ಮತ್ತು ದಿ| ಕೋಟ್ಯಪ್ಪ ಪೂಜಾರಿ ವರ್ಪಾಳೆ ಸಭಾ ವೇದಿಕೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿಯ ಅಂತರ್‌ಘಟಕ ಸಾಂಸ್ಕೃತಿಕ ವೈಭವ ’ಡೆನ್ನನ ಡೆನ್ನನ’ ಎಂಬ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ತೆಂಕುತಿಟ್ಟಿನ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಉದ್ಘಾಟಿಸಿ ಮಾತನಾಡುತ್ತಾ, ಮನುಷ್ಯ ಜನ್ಮದಲ್ಲಿ ಹುಟ್ಟಿ ಹೇಗೆ ನಡೆಯಬೇಕು ಎಂಬ ಮಾರ್ಗದರ್ಶನ ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳು ಹಾಗೂ ಹೇಗೆ ಬದುಕಬೇಕು ಎಂದು ಇತಿಹಾಸಕ್ಕೆ ಅಡಿಪಾಯ ಹಾಕಿಕೊಟ್ಟ ಕೋಟಿ-ಚೆನ್ನಯರ ನಾಡಾದ ತುಳುನಾಡಿನ ಸಂಸ್ಕೃತಿ-ಸಂಸ್ಕಾರವನ್ನು ಉಳಿಸಿ-ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ಹೇಳಿದರು. ಯುವ ಸಮುದಾಯವನ್ನು ಸಂಘಟಿಸಿ, ಸಮಾಜವನ್ನು ಉತ್ತಮ ದಾರಿಗೆ ಕೊಂಡೊಯ್ಯುವಲ್ಲಿ ಯುವವಾಹಿನಿ ಹಮ್ಮಿಕೊಂಡ ಈ ಕಾರ್ಯಕ್ರಮ ಇನ್ನು ಮುಂದೆಯೂ ನಿರಂತರವಾಗಿ ನಡೆಯಲಿ, ಯುವ ಪ್ರತಿಭೆಗಳಿಗೆ ಅವಕಾಶ ದೊರೆಯಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ವಿವಿಧ ಕ್ಷೇತ್ರಗಳ ಬಿಲ್ಲವ ಸಮಾಜದ ಸಾಧಕ ಕಲಾವಿದರನ್ನು ಸನ್ಮಾನಿಸಿ, ಮಾತನಾಡುತ್ತಾ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬಿಲ್ಲವ ಕಲಾವಿದರಿದ್ದಾರೆ. ಆದರೂ ತೆರೆಮರೆಯಲ್ಲಿ ಬೆಳಕಿಗೆ ಬಾರದ ಇನ್ನೂ ಅನೇಕ ಶ್ರೇಷ್ಠ ಕಲಾವಿದರಿದ್ದು, ಅವರಿಗೆ ಯುವವಾಹಿನಿಯಂತಹ ಸಂಘಟನೆಗಳು ಅವಕಾಶ ನಿರ್ಮಿಸಿ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪೂರ್ವಾಧ್ಯಕ್ಷ ಕೆ. ವಸಂತ ಸಾಲಿಯಾನ್ ರವರು ಮಾತನಾಡಿ ಯುವಜನತೆಯಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಹೊಸ ಚಿಂತನೆಯೊಂದಿಗೆ ಸದೃಢ ಯುವ ಸಮಾಜದ ಕಡೆಗೆ ತರುವಲ್ಲಿ ಯುವವಾಹಿನಿಯು ಕಳೆದ ಹಲವು ವರ್ಷದಿಂದ ಶ್ರಮಿಸುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಯುವಕರು ಇನ್ನಷ್ಟು ತಮ್ಮ-ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪದ್ಮನಾಭ ಮರೋಳಿ ವಹಿಸಿ ಮಾತನಾಡಿ ಕಳೆದ ೩ ವರ್ಷದ ಹಿಂದೆ ಬೆಳ್ತಂಗಡಿಯಲ್ಲಿ ಯುವವಾಹಿನಿ ಘಟಕವನ್ನು ಪ್ರಾರಂಭಿಸಿ ಸಮಾಜದ ಏಳಿಗೆಗಾಗಿ ಯುವನಾಯಕರನ್ನು ಸೃಷ್ಟಿಸುವ ಕೆಲಸವನ್ನು ಬೆಳ್ತಂಗಡಿ ಘಟಕವು ಮಾಡುತ್ತಿದೆ ಎಂದರು.
ನಾರಾವಿ ಕ್ಷೇತ್ರದ ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್, ಉಜಿರೆ ಕ್ಷೇತ್ರದ ಜಿ.ಪಂ. ಸದಸ್ಯೆ ನಮಿತಾ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಪೂರ್ವಾಧ್ಯಕ್ಷ ಶೈಲೇಶ್ ಕುಮಾರ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯಾ, ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಬೆಳ್ತಂಗಡಿ ಘಟಕದ ಸ್ಥಾಪಕಾಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, ಸಾಂಸ್ಕೃತಿಕ ಸಮ್ಮಿಲನದ ಪ್ರಧಾನ ಸಂಚಾಲಕ ಸಂಪತ್ ಬಿ. ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
’ಡೆನ್ನನ ಡೆನ್ನನ’ ಕಾರ್ಯಕ್ರಮವು ಯುವವಾಹಿನಿಯ 19 ಘಟಕಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಸಾಂಸ್ಕೃತಿಕ ರಂಗ ಸಮ್ಮಾನ, ಯುವ ಪ್ರತಿಭೆಗಳಿಗೆ ಪುರಸ್ಕಾರ ಹಾಗೂ ಸಾಂಸ್ಕೃತಿಕ ಸೇವೆಗೈಯುತ್ತಿರುವ ಸಂಸ್ಥೆಗಳಿಗೆ ಗೌರವ, ದಿನವಿಡೀ ಯುವ ಪ್ರತಿಭೆಗಳ ಪ್ರದರ್ಶನ ಸಾಂಸ್ಕೃತಿಕ ಲೋಕದ ಸಾಕ್ಷಾತ್ಕಾರಕ್ಕೆ ನಾಂದಿಯಾಯಿತು. ಮಾತ್ರವಲ್ಲದೆ ಇದು ಸಂಸ್ಕೃತಿ ಸಂಪ್ರದಾಯವನ್ನು ಪ್ರತಿಬಿಂಬಿಸುವ ವೇದಿಕೆಯಾಯಿತು.
ರಾಕೇಶ್ ಕುಮಾರ್ ಮೂಡುಕೋಡಿ ಸ್ವಾಗತಿಸಿ, ಚಂದ್ರಹಾಸ ಬಳಂಜ, ಸ್ಮಿತೇಶ್ ಬಾರ್ಯ, ಸುಧಾಮಣಿ ಕಾರ್ಯಕ್ರಮ ನಿರೂಪಿಸಿ, ಅಶ್ವಥ್ ಧನ್ಯವಾದವಿತ್ತರು.
SUPER PROGRAMME CONDUCTED BY BELTHANGADY CHAPTER