ಪಶ್ಚಿಮ ಕರಾವಳಿ ಪರ್ವತ ಶ್ರೇಣಿಯ ತಪ್ಪಲಿನ ಬೆಳ್ತಂಗಡಿ ತಾಲೂಕು ತೆಂಕ ಕಾರಂದೂರು ಗ್ರಾಮದ ಅಂಗಡಿಬೆಟ್ಟು ಎಂಬಲ್ಲಿಯ ನಿವಾಸಿಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿದ್ದರೂ ಕಲಿಕೆಯಲ್ಲಿ ಹಿಂದೆ ಬೀಳದೆ ವೈದ್ಯಕೀಯ ಪದವಿ ಪಡೆದು ಉನ್ನತವಾದ ಉದ್ಯೋಗವನ್ನು ಪಡೆದು ಬಡಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಜನಸೇವೆ ಮಾಡುತ್ತಿರುವ ಓರ್ವ ಸಾಧಕ ಡಾ. ಸದಾನಂದ ಪೂಜಾರಿ ಇವರು. ಶ್ರೀಯುತರು ಕೃಷಿ ಕುಟುಂಬದಲ್ಲಿ ಜನಿಸಿ, ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಪ್ರಾಥಮಿಕ ಶಾಲೆ, ತೆಂಕ ಕಾರಂದೂರಿನಲ್ಲಿ ನಡೆಸಿ, ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದು, ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿರುತ್ತಾರೆ. ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪದವಿ ಮುಗಿಸಿ. ಪ್ರತಿಷ್ಠಿತ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂ.ಎಸ್. ಇನ್ ಮೆಡಿಕಲ್ ಸರ್ಜರಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಹ್ಯಾನ್ಸ್ ಇನ್ಸ್ಟಿಟ್ಯೂಟ್ ಆಫ್ ನೆಪ್ರೋ ಉರೋಲೊಜಿ ಇಲ್ಲಿ ಎಂಟೆಕ್ (ಯೋರೊಲೊಜಿ) ಹಾಗೂ ನವದೆಹಲಿಯ ಹ್ಯಾಮ್ಸ್ ವಲ್ರ್ಡ್ ಲೆಪ್ರೋಸ್ಕೋಪಿಕ್ ಹಾಸ್ಪಿಟಲ್ ಇಲ್ಲಿ ಪದವಿಯನ್ನು ಪಡೆದಿರುತ್ತಾರೆ.
ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸರಕಾರಿ ಸೇವೆಗೆ ಸೇರಿದ ಇವರು ಹೆಚ್ಚಿನ ಪ್ರಭಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ. ಸಾರ್ವಜನಿಕ ಆಸ್ಪತ್ರೆ ತರಿಕೆರೆ, ಚಿಕ್ಕಮಗಳೂರು ಇಲ್ಲಿ ಶಸ್ತ್ರಚಿಕಿತ್ಸಾ ತಜ್ಞರಾಗಿ ಮೂರು ವರ್ಷ ಸೇವೆ ಸಲ್ಲಿದ ಅನುಭವ ಇವರದು. ಪ್ರಕೃತ ಮಂಗಳೂರಿನ ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಮೂತ್ರರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು, ಕೆ.ಎಂ.ಸಿ. ಮಂಗಳೂರು ಇಲ್ಲಿ ಮೂತ್ರ ರೋಗ ವಿಭಾಗದಲ್ಲಿ ಸಂದರ್ಶಕ ವೈದ್ಯರಾಗಿ ಕೆಲಸ ನಿರ್ವಹಿಸಿಕೊಂಡಿರುತ್ತಾರೆ. ಮಂಗಳೂರಿನಲ್ಲಿ ಜ್ಯೋತಿ ಡಯಾಗ್ನಿಸ್ಟಿಕ್ನಲ್ಲಿ ತನ್ನ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು ಎಸ್.ಸಿ.ಎಸ್. ಆಸ್ಪತ್ರೆ, ಮಂಗಳೂರು, ಜಯಶ್ರೀ ನರ್ಸಿಂಗ್ ಹೋಮ್, ಗ್ಲೋಬಲ್ ಆಸ್ಪತ್ರೆ ಉರ್ವ, ಕೆ.ಎಂ.ಸಿ. ಆಸ್ಪತ್ರೆ, ಮಂಗಳೂರು ಇಲ್ಲಿ ಸಂದರ್ಶಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಕಾರ್ಯಕ್ಷೇತ್ರ ಮತ್ತು ವಿವಿಧ ಸಂಘಸಂಸ್ಥೆಗಳಿಂದ ಹಲವಾರು ಪ್ರಶಸ್ತ್ತಿಗಳನ್ನು ಪಡೆದಿದ್ದು ಇದರಲ್ಲಿ ಭಾರತೀಯ ಜೂನಿಯರ್ ಛೇಂಬರ್ನಿಂದ ಔಟ್ ಸ್ಟಾಂಡಿಂಗ್ ಯಂಗ್ ಇಂಡಿಯನ್ ಅವಾರ್ಡ್, ಚಿಕ್ಕಮಗಳೂರು ಜಿಲ್ಲೆಯ ಬೆಸ್ಟ್ ಸರ್ಜನ್ ಅವಾರ್ಡ್ ಮುಂತಾದ ಪ್ರಶ್ತಸ್ತಿಗಳು ಇವರ ಮುಡಿಗೇರಿದೆ. ಇವರು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ದಕ್ಷಿಣ ಕನ್ನಡ ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಸೆಮಿನಾರ್ಗಳನ್ನು ನಡೆಸುವುದು, ಭಾಷಣ, ಸಂಘಟನೆ, ಮೂತ್ರರೋಗ ಕುರಿತು ಅರಿವು ಕಾರ್ಯಕ್ರಮ ಅಲ್ಲದೆ ಬಾನುಲಿ ಹಾಗೂ ದೂರದರ್ಶನಗಳಲ್ಲಿ ಸಂದರ್ಶನಗಳ ಮೂಲಕ ಮಾಹಿತಿ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಇವರ ಹವ್ಯಾಸವಾಗಿರುತ್ತದೆ.
ಬಂಟ್ವಾಳದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರ ರೋಗ ತಜ್ಞೆಯಾದ ಡಾ; ಸೌಮ್ಯ ಇವರ ಧರ್ಮಪತ್ನಿಯಾಗಿದ್ದು, ಓರ್ವ ಗಂಡು ಮಗ ಸೋಹನ್ ಕುಮಾರ್ ಮಂಗಳೂರಿನ ಸಂತ ಲೂಡ್ರ್ಸ್ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಯುವವಾಹಿನಿಯ ಅಭಿಮಾನಿಯಾಗಿದ್ದು, ತನ್ನ ಸರಕಾರಿ ಸೇವೆಯನ್ನು ದೇವರ ಸೇವೆ ಎಂದು ಬಗೆದು ದೀನ ದಲಿತರ ಸೇವೆಯನ್ನು ನಿಸ್ವಾರ್ಥ ಮನೋಭಾವದಿಂದ ಮಾಡಿಕೊಂಡು ಬರುತ್ತಿರುವ ಡಾ. ಸದಾನಂದ ಪೂಜಾರಿ ಇವರಿಗೆ ತಮ್ಮ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸುತ್ತಾ ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.08.2017 ರಂದು ಉಪ್ಪಿನಂಗಡಿಯ ಎಚ್ ಎಮ್.ಆಡಿಟೋರಿಯಂ ಇಲ್ಲಿ ಜರುಗಿದ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ತಮಗೆ ಯುವವಾಹಿನಿ ಗೌರವ ಅಭಿನಂದನೆ’ ನೀಡಿ ಗೌರವಿಸುತ್ತಿದೆ
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಕೆ.ವಸಂತ ಬಂಗೇರ, ಐ ಎಪ್ ಎಸ್ ಅಧಿಕಾರಿ ಶ್ರೀ ದಾಮೋದರ ಎ.ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ ಜಯಾನಂದ
, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲು, ಕಾಸರಗೋಡು ಸರಕಾರಿ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ.ರಾಜೇಶ್ ಬೆಜ್ಜಂಗಳ,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಸಮಾವೇಶ ನಿರ್ದೇಶಕರಾದ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಉಪಸ್ಥಿತರಿದ್ದರು