ಮಂಗಳೂರು ತಾಲೂಕಿನ ತಾಳಿಪಾಡಿ ಗ್ರಾಮದ ದಿ| ಸಂಜೀವ ಜಿ. ಅಮೀನ್ ಮತ್ತು ಶ್ರೀಮತಿ ಜಾನಕಿಯವರ ಸುಪುತ್ರರಾದ ಡಾ| ಸದಾನಂದ ಕುಂದರ್ರವರು ಸುಮಾರು 34 ವರ್ಷಗಳಿಂದ ನೆಲ್ಯಾಡಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಜಾದೂಗಾರರಾಗಿಯೂ ಖ್ಯಾತಿಯನ್ನು ಪಡೆದಿರುತ್ತಾರೆ. ಕಳೆದ 20 ವರ್ಷಗಳಿಂದ ಕರ್ನಾಟಕ, ಕೇರಳ, ಗೋವಾ ರಾಜ್ಯಗಳಲ್ಲಿ 900 ಕ್ಕೂ ಮಿಕ್ಕಿ ಜಾದೂ ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆಯನ್ನು ಗಳಿಸಿರುತ್ತಾರೆ. ಆರೋಗ್ಯ ಮಾಹಿತಿಯಲ್ಲಿ ಜಾದೂ, ಜನಜಾಗೃತಿಗಾಗಿ ಜಾದೂ, ಬುದ್ಧಿಮಾಂದ್ಯರಿಗೆ ಜಾದೂ, ಗುಜರಾತ್ ಭೂಕಂಪ ಮತ್ತು ತ್ಸುನಾಮಿ ಸಂತ್ರಸ್ತರ ಪರಿಹಾರ ನಿಧಿಗಾಗಿ ಜಾದೂ ಹೀಗೆ ಹಲವು ಜನಹಿತ ಕಾರ್ಯಗಳಲ್ಲಿಯೂ ಜಾದೂ ಪ್ರದರ್ಶನ ನೀಡಿರುತ್ತಾರೆ.
ಇವರು ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದು ವಿವಿಧ ಕ್ಷೇತ್ರಗಳ ಸಾಧನೆಗಾಗಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. ಶ್ರೀಯುತರು ಹೇಮಾವತಿಯವರನ್ನು ವಿವಾಹವಾಗಿ ಸೌಮ್ಯ, ಸುಪ್ರಿಯಾ, ಸುಪ್ರಭ ಎಂಬ ಮಕ್ಕಳನ್ನು ಪಡೆದಿರುತ್ತಾರೆ.
ಯುವವಾಹಿನಿ ಉಪ್ಪಿನಂಗಡಿ ಘಟಕದ ಮಾಜಿ ಅಧ್ಯಕ್ಷರಾದ ಇವರು ಯುವವಾಹಿನಿ ಕೇಂದ್ರ ಸಮಿತಿಯಲ್ಲಿ ನಿರ್ದೇಶಕ, ಉಪಾಧ್ಯಕ್ಷ ಹುದ್ದೆಗಳನ್ನು ನಿರ್ವಹಿಸಿ 2010-11 ನೇ ಸಾಲಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಮಿತಿಯ ಸ್ವಂತ ಕಛೇರಿ ಆಗಬೇಕೆಂಬ ಬಹುಕಾಲದ ಕನಸು ಇವರ ಅಧ್ಯಕ್ಷತೆಯ ಅವಧಿಯಲ್ಲಿ ನನಸಾಗಿ ಉದ್ಘಾಟನೆಯಾಗಿರುವುದು ಪ್ರಮುಖ ಅಂಶ. ಅಲ್ಲದೆ ಕೇಂದ್ರ ಸಮಿತಿಯ ಸಹಯೋಗದೊಂದಿಗೆ ಮಂಗಳೂರು ಘಟಕದ ಆತಿಥ್ಯದಲ್ಲಿ ಸಭಾ ನಡಾವಳಿ ಮತ್ತು ಯುವವಾಹಿನಿಯ ಕ್ರಮ ನಿಬಂಧನೆಗಳ ಬಗ್ಗೆ ತರಬೇತಿ ಶಿಬಿರ, ಮುಲ್ಕಿ ಘಟಕದ ಆತಿಥ್ಯದಲ್ಲಿ ’ಐಸಿರಿ 2011’ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಹಾಗೂ ಉಡುಪಿ ಘಟಕದ ಆಶ್ರಯದಲ್ಲಿ ಯುವಸಂಪರ್ಕದಲ್ಲೊಂದು ’ನವ ಚಿಗುರು’ ಕಾರ್ಯಕ್ರಮ ನಡೆದಿರುತ್ತದೆ. ಕೇಂದ್ರ ಸಮಿತಿಯ ವಿದ್ಯಾನಿಧಿಯಿಂದ ಲಕ್ಷ ರೂಪಾಯಿಗೂ ಮಿಕ್ಕಿ ವಿದ್ಯಾರ್ಥಿವೇತನ ನೀಡಲಾಗಿದೆ. ಹೆಚ್ಚಿನ ಎಲ್ಲಾ ಘಟಕಗಳು ಕ್ರಿಯಾಶೀಲವಾಗಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಆರೋಗ್ಯ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿವೆ. ಮೂಲ್ಕಿ ಘಟಕದ ತುಳುನಾಡ ವೈಭವದ ಅದ್ದೂರಿಯ ಶತವೈಭವ’ ಕಾರ್ಯಕ್ರಮ ಇವರ ಅಧ್ಯಕ್ಷ ಅವಧಿಯಲ್ಲಿ ನಡೆದಿರುತ್ತದೆ ಮತ್ತು ಈ ಹಿಂದಿನಂತೆ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರುತ್ತದೆ.
ವಿಳಾಸ : ‘ಚೇತನಾ ಕ್ಲಿನಿಕ್’, ಅಂಚೆ ನೆಲ್ಯಾಡಿ, ಪುತ್ತೂರು ತಾಲೂಕು, ದ.ಕ. – 574229. ಫೋನ್ : 08251-254245 (ಆ), 254945 ಸೆಲ್ : 9448124245