ಕೂಳೂರು :- ದೀಪಾವಳಿಯ ಬೆಳಕು ಅಂತರಾತ್ಮವನ್ನು ಉದ್ದೀಪನಗೊಳಿಸಬೇಕು, ಪಟಾಕಿ ಸದ್ದು ನಿದ್ದೆಯಲ್ಲಿದ್ದವರನ್ನೂ ಬಡಿದೆಬ್ಬಿಸುವಂತೆ ದೀಪಾವಳಿ ಹಬ್ಬ ನಮ್ಮೊಳಗೆ ಅಂತರ್ಗತವಾಗಿರುವ ಅಂತಃಸತ್ವವನ್ನು ಬಡಿದೆಬ್ಬಿಸಬೇಕು ಮತ್ತು ಅಂಧಕಾರವನ್ನು ಹೋಗಲಾಡಿಸಬೇಕು ಎಂದು ಕುದ್ರೋಳಿ ನಾರಾಯಣ ಗುರು ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಉಪನ್ಯಾಸ ನೀಡಿದರು. ಅವರು ಯುವವಾಹಿನಿ (ರಿ.) ಕೂಳೂರು ಘಟಕ ವತಿಯಿಂದ ದಿನಾಂಕ 29 ಅಕ್ಟೋಬರ್ 2022 ರಂದು ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ರವರ ಮನೆ ಪಂಜಿಮೊಗರು ಶ್ರೀರಕ್ಷಾದಲ್ಲಿ ನಡೆದ -ನಮ್ಮ ಮನೆ ಹಬ್ಬ ದೀಪಾವಳಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಕಾರ್ಯಕ್ರಮವನ್ನು ಮನೆಯ ದೇವರ ಮುಂದೆ ಪ್ರಾರ್ಥನೆ ಮಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಯುವವಾಹಿನಿ ಕೂಳೂರು ಘಟಕವು ಯುವವಾಹಿನಿ ಪ್ರತಿಷ್ಠಿತ ಘಟಕಗಳಲ್ಲೊಂದಾಗಿದ್ದು ನಿರಂತರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುವ ಉತ್ಸಾಹಿ ಘಟಕವಾಗಿದೆ. ಇಂದಿನ ಈ ಕಾರ್ಯಕ್ರಮವು ಮುಂದಿನ ಪೀಳಿಗೆಗೆ ಹಬ್ಬದ ಆಚರಣೆಯ ಮಹತ್ವ ತಿಳಿಸಿಕೊಟ್ಟಿದೆ. ಈ ದೀಪಾವಳಿ ಹಬ್ಬ ಎಲ್ಲರ ಬಾಳಲ್ಲೂ ಬೆಳಕನ್ನು ತರಲಿ ಎಂದು ಶುಭ ಹಾರೈಸಿದರು. ಮನೆಯ ಹಿರಿಯರಾದ ಘಟಕದ ಮಾರ್ಗದರ್ಶಕರಾದ ಚಂದಪ್ಪ ಸನಿಲ್ ತಮ್ಮ ಮನೆಯಲ್ಲಿ ನಡೆದ ನಮ್ಮ ಮನೆ ಹಬ್ಬ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ.ಎಸ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಯ ಮುಖ್ಯ ಉದ್ದೇಶ ಸಾಮಾಜಿಕ ಚಿಂತನೆ, ಸಂಪರ್ಕದ ನೆಲೆಯಲ್ಲಿ ಪ್ರತಿ ವರುಷ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮವು ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಮೂಡಿಬಂದಿರುತ್ತದೆ. ದಿನಸಿ ಸಾಮಗ್ರಿ ಪಡೆದಿರುವ ಕುಟುಂಬದ ಸ್ಥಿತಿ ನೋಡುವಾಗ ನಾವು ನೀಡಿರುವುದಕ್ಕೆ ಸಾರ್ಥಕ ಭಾವ ಬಂದಿದೆ. ಪ್ರತಿ ವರುಷ ನಮ್ಮ ಮನೆ ಹಬ್ಬ ದೀಪಾವಳಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು ಈ ವರುಷ ನಮ್ಮ ಮನೆಯಲ್ಲಿ ನಡೆದಿರುವುದು ಸಂತಸ ತಂದಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಇನ್ನೋರ್ವ ಮುಖ್ಯ ಅತಿಥಿ ಯಾಗಿ ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಬಾಬು ಪೂಜಾರಿ, ಘಟಕದ ಕಾರ್ಯದರ್ಶಿ ಸುಮಾ ಶಿವು ಕೋಡಿಕಲ್, ಮನೆಯ ಯಜಮಾನಿ ರೋಹಿಣಿ ಸಿ.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ಮಾರ್ಗದರ್ಶಕರಾದ ಗಿರಿಧರ್ ಸನಿಲ್, ಕೇಂದ್ರ ಸಮಿತಿ ಮತ್ತು ಇತರ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ನಯನ ರಮೇಶ್ ಪ್ರಾಸ್ತಾವಿಕ ಮಾತನಾಡಿದರು. ಮಧುಶ್ರೀ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ, ಲೋಕೇಶ್ ಪೂಜಾರಿ ಪ್ರಾರ್ಥಿಸಿ, ಸುಮಾ ಶಿವು ವಂದಿಸಿದರು. ಸಭಾ ಕಾರ್ಯಕ್ರಮದ ಮೊದಲು ದೀಪಾವಳಿಯ ಆಚರಣೆಯ ಮೂರೂ ದಿನಗಳ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ನರಕ ಚತುರ್ದಶಿಯ ದಿನ ಬೆಳಗ್ಗೆ ಪರಿಸರದ ಮಗುವಿಗೆ ಎಣ್ಣೆ ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿ, ಮರುದಿನ ಲಕ್ಷ್ಮೀ ಪೂಜೆ, ಗೋಪೂಜೆ, ಬಲೀಂದ್ರ ಪೂಜೆಯ ಕ್ರಮ, ತುಳಸಿ ಪೂಜೆ ಮಾಡಲಾಯಿತು. ಲೋಕೇಶ್ ಪೂಜಾರಿಯವರ ಬಲೀಂದ್ರ ಲೆಪ್ಪುಗೆ ಜನ ಧ್ವನಿಗೂಡಿಸಿದರು. ಬಳಿಕ ಸೇರಿದ್ದ ಜನ ಪಟಾಕಿ ಹಂಚಿ ಸಂಭ್ರಮಪಟ್ಟರು. ಘಟಕದ ಸದಸ್ಯರಿಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಮತಾ ರಾಜ್ ಪ್ರಥಮ, ರಕ್ಷಾ ಜೆ ದ್ವಿತೀಯ ಬಹುಮಾನ ಪಡೆದರು. ಗೂಡುದೀಪ ಸ್ಪರ್ಧೆಯಲ್ಲಿ ಹರಿಚರಣ್ ಪ್ರಥಮ, ಶಿವಾನಂದ ಉರುಂದಾಡಿ ದ್ವಿತೀಯ, ಸಾಂಪ್ರದಾಯಿಕ ಉಡುಗೆಯಯಲ್ಲಿ ಜಯ ಬಂಗೇರ ಮತ್ತು ಇಂದಿರಾ ಸುರೇಶ್, ಅದೃಷ್ಟದ ಆಟದಲ್ಲಿ ಶ್ಯಾಮಿಲಿ ಸಚಿನ್ ಬಹುಮಾನ ಗೆದ್ದುಕೊಂಡರು. ಸಭಾ ಕಾರ್ಯಕ್ರಮದ ನಂತರ ರಕ್ಷತಾ ಬೋಳೂರು ನೆರೆದಿರುವ ಸಭಿಕರನ್ನು ವಿವಿಧ ಆಟೋಟ ಸ್ಪರ್ಧೆಗಳ ಮೂಲಕ ಮನರಂಜಿಸಿದರು. ಕಾರ್ಯಕ್ರಮದ ವಿಶೇಷವಾಗಿ ಸದಸ್ಯರು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು.