ಕೊಲ್ಯ : ಚಿಣ್ಣರ ಲೋಕವನ್ನೆ ಸೃಷ್ಟಿಸಿದ ಅರ್ಥಪೂರ್ಣ ಆಚರಣೆ, ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮುದ್ದುಮಕ್ಕಳ ಮಾಯಾ ಲೋಕವನ್ನೆ ಸೃಷ್ಟಿಸಿದ ಈ ಕಾರ್ಯಕ್ರಮ ಅರ್ಥಪೂರ್ಣ ಆಚರಣೆ ಎಂದು ಯುವವಾಹಿನಿ (ರಿ)ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಅಧ್ಯಕ್ಷರು ಮತ್ತು ಕೊಲ್ಯ ಘಟಕದ ಸಲಹೆಗಾರರೂ ಆಗಿರುವ ಅಶೋಕ್ ಕುಮಾರ್ ತಿಳಿಸಿದರು.
ಅವರು ದಿನಾಂಕ 14/11/2018 ರಂದು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕೊಲ್ಯದಲ್ಲಿ ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಜರುಗಿದ ಕೊಂಡಾಟದ ಬಾಲೆ -2018 ಮುದ್ದುಕಂದ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಾಲನಟಿ ಸಪ್ತಾ ಪಾವೂರು
ಚಲನಚಿತ್ರ ಬಾಲನಟಿ ಮತ್ತು ಬಹುಮುಖ ಪ್ರತಿಭೆ ಕುಮಾರಿ ಸಪ್ತಾ ಪಾವೂರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳ ದಿನಾಚರಣೆಗೆ ಅರ್ಥಪೂರ್ಣ ಮೆರುಗನ್ನು ನೀಡಿದರು.ಇದೇ ಸಂದರ್ಭದಲ್ಲಿ ಚಲನಚಿತ್ರ,ನೃತ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಪಾಂಡಿತ್ಯವನ್ನು ತೋರ್ಪಡಿಸಿದ,ಇತ್ತೀಚೆಗೆ ತೆರೆಕಂಡ ಕನ್ನಡ ಸಿನಿಮಾ ” ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು” ಇದರಲ್ಲಿ ಬಾಲನಟಿಯಾಗಿ ಅದ್ಭುತ ಅಭಿನಯವನ್ನು ನೀಡಿರುವ ಸಪ್ತಾ ಪಾವೂರುರವರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು.
ಪ್ರಪ್ರಥಮವಾಗಿ ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ಆಯೋಜಿಸಿದ ಕೊಂಡಾಟದ ಬಾಲೆ -2018 ರ ರೂವಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಮಾತನಾಡಿ , ಸರ್ವರ ಸಹಕಾರದಿಂದ ಈ ಕಾರ್ಯಕ್ರಮವನ್ನು ಔಚಿತ್ಯ ಪೂರ್ಣವಾದ ಅರ್ಥವನ್ನು ಪಡೆಯಿತು,ಮುಂದೆ ವರ್ಷಪ್ರತಿಯೂ ಈ ಕಾರ್ಯಕ್ರಮವು ನಿತ್ಯನಿರಂತರವಾಗಿ ಸಾಗಲಿ ಎಂದು ಸಂತಸ ವ್ಯಕ್ತಪಡಿಸಿದರು.
ಕೇಸರಿ ಮಾತೃ ಮಂಡಳಿ ಕುಂಪಲ ಇದರ ಗೌರವಾಧ್ಯಕ್ಷರಾದ ಜಯಲಕ್ಷ್ಮಿ ಮೋನಪ್ಪ ಪೂಜಾರಿ, ಚಲನಚಿತ್ರ ಬಾಲನಟಿ ಸಪ್ತಾ ಪಾವೂರು , ಛಾಯಚಿತ್ರಗಾರರು ಮುಖ್ಯಪ್ರಾಣ ಡಿಜಿಟಲ್ ಜಯಪ್ರಸಾದ್ ಸಾಲ್ಯಾನ್, ಕೋಟೆಕಾರು ವ್ಯವಸಾಯ ಸೇವಾ ಸಂಘ (ನಿ) ಇದರ ನಿರ್ದೇಶಕರು ಮತ್ತು ಅರುಣ್ ಸ್ಟುಡಿಯೋ ಇದರ ಮಾಲಕರಾದ ಅರುಣ್ ತೊಕ್ಕೋಟ್ಟು, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಕೊಲ್ಯ ಘಟಕದ ಸಲಹೆಗಾರರಾದ ಅಶೋಕ್ ಕುಮಾರ್ ಮಂಗಳೂರು, ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯದ ಅಧ್ಯಕ್ಷರಾದ ಆನಂದ್ ಎಸ್ ಕೊಂಡಾಣ ಮತ್ತು ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಮಂಡಳಿ ಕೊಲ್ಯ ಇದರ ಅಧ್ಯಕ್ಷರಾದ ಮೀನಾಕ್ಷಿ ಐತಪ್ಪರವರು ಮುಖ್ಯಅತಿಥಿಗಳಾಗಿ ಭಾಗವಹಿಸಿದರು.
ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷರಾದ ನವೀನ್ ಚಂದ್ರ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಪ್ರಚಾರ ನಿರ್ದೇಶಕರಾದ ಹರೀಶ್ ಪೂಜಾರಿ ಮಂಗಳೂರು, ಪತ್ರಿಕಾ ಕಾರ್ಯದರ್ಶಿ ಮೋಹನ್ ದಾಸ್ ಮತ್ತು ರೋಟರಿ ಕ್ಲಬ್ ಮಂಗಳೂರು ಪೂರ್ವ ಇದರ ಅಧ್ಯಕ್ಷರಾದ ಜೖೆಕುಮಾರ್ ಪರ್ಯತ್ತೂರು, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಮಂಡಳಿಯ ಸದಸ್ಯರು, ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಸದಸ್ಯರು , ಅವಿನಾಶ್ ಗ್ಯಾಸ್ ಏಜನ್ಸಿಯ ಮಾಲಕರಾದ ಗೋಪಾಲ್, ಹೀಲ್ಸ್ ಮಂಗಳೂರು ಇದರ ಉಪಾಧ್ಯಕ್ಷರಾದ ಅಜಿತ್ ಪೂಜಾರಿ ಪಜೀರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೃನ್ಮನ ಮುದಗೊಳಿಸಿದ ಮುದ್ದು ಮಕ್ಕಳ ಬಣ್ಣದ ಲೋಕ : ಕೊಂಡಾಟದ ಬಾಲೆ -2018 ಮುದ್ದುಕಂದ ಸ್ಪರ್ಧೆಯ ಬಹುಮಾನ ವಿತರಣೆ
ಚಿಣ್ಣರ ಬಣ್ಣಬಣ್ಣದ ಲೋಕ ಬಣ್ಣಿಸಲು ಅಸಾಧ್ಯ, ಸಭಾಂಗಣದ ತುಂಬೆಲ್ಲಾ ಮುದ್ದು ಕಂದಮ್ಮಗಳ ಕಲರವ, ಕಿಲಕಿಲ ನಗು, ಎಲ್ಲರ ಹೃದಯವನ್ನು ತಟ್ಟಿದ ಮನಸ್ಸುಗಳನ್ನು ಮುದಗೊಳಿಸಿದ ಮುದ್ದುಮಕ್ಕಳ ಮಾಯಾಲೋಕ.ಇದು ಯವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ಜರಗಿದ ಮಕ್ಕಳ ದಿನಾಚರಣೆಯ ಸುಂದರ ನೋಟ. ಇದೇ ಸಂದರ್ಭದಲ್ಲಿ ಯುವವಾಹಿನಿ (ರಿ) ಕೊಲ್ಯ ಘಟಕವು ಆಯೋಜಿಸಿದ ಒಂದರಿಂದ ಮೂರು ವರುಷಗಳ ಒಳಗಿನ ಮುದ್ದು ಕಂದಮ್ಮಗಳ ಸ್ಪರ್ಧೆ ಕೊಂಡಾಟದ ಬಾಲೆ -2018 ಭಾಗವಹಿಸಿದ ಎಲ್ಲಾ 39 ಕಂದಮ್ಮಗಳನ್ನು ಪ್ರಶಸ್ತಿ ಪತ್ರ,ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಕೊಂಡಾಟದ ಬಾಲೆ – 2018 ರ ಸ್ಪರ್ಧೆಯಲ್ಲಿ ವೃಷ್ಠಿ ಕೋಟೆಕಾರು ಪ್ರಥಮ, ದಕ್ಷ್ ವೖೆ ಸನಿಲ್ ಮಾಡೂರು ದ್ವಿತೀಯ ಮತ್ತು ರಜ್ವಿಕಾ ಕಾಡಬೆಟ್ಟು ಬಂಟ್ವಾಳ ತೃತೀಯ ಬಹುಮಾನವನ್ನು ಪಡೆದರು,ಇವರಿಗೆ ಪ್ರಶಸ್ತಿಪತ್ರ,ಸ್ಮರಣಿಕೆ ಮತ್ತು ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಮುದ್ದುಮಕ್ಕಳ ಕೊಂಡಾಟದ ಬಾಲೆ -2018 ರ ಸ್ಪರ್ಧೆಯ ತೀರ್ಪುಗಾರರಾಗಿ ಛಾಯಾಗ್ರಾಹಕರಾದ ಅರುಣ್ ತೊಕ್ಕೋಟ್ಟು ,ಜಯಪ್ರಸಾದ್ ಸಾಲ್ಯಾನ್ ಮತ್ತು ಮಕ್ಕಳ ತಜ್ಞ ಡಾ|ಉದಯಶಂಕರ್ ಭಟ್ ರವರು ಸಹಕರಿಸಿದರು. ಮುದ್ದುಕಂದಮ್ಮಗಳ ಸ್ಪರ್ಧೆಗೆ “ಕೊಂಡಾಟದ ಬಾಲೆ -2018″ಎಂಬ ಸುಂದರವಾದ ಶೀರ್ಷಿಕೆಯನ್ನು ಸೂಚಿಸಿದ ಯುವವಾಹಿನಿ (ರಿ) ಕೊಲ್ಯ ಘಟಕದ ಸದಸ್ಯರಾದ ಸೌಮ್ಯ ಕುಸುಮಾಕರ್ ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಸ್ವಾಗತಿಸಿದರು, ಯಶಿಕಾ.ಎಸ್ ಮತ್ತು ಉನ್ನತಿ ಎಸ್ ಪ್ರಾರ್ಥಿಸಿದರು, ಘಟಕದ ಪ್ರಚಾರ ನಿರ್ದೇಶಕರಾದ ಲತೀಶ್ ಎಮ್ ಸಂಕೋಳಿಗೆಯವರು ಪ್ರಸ್ತಾವನೆಗೖೆದರು, ಘಟಕದ ಸದಸ್ಯರಾದ ಸೌಮ್ಯ ಕುಸುಮಾಕರ್ ರವರು ಅಭಿನಂದನಾ ಪತ್ರವನ್ನು ವಾಚಿಸಿದರು,ಯುವವಾಹಿನಿ (ರಿ) ಕೊಲ್ಯ ಘಟಕದ ಸ್ಥಾಪಕಾಧ್ಯಕ್ಷರಾದ ಸುರೇಶ್ ಬಿ.ಯವರು ಕಾರ್ಯಕ್ರಮ ನಿರೂಪಿಸಿದರು ಘಟಕದ ಕಾರ್ಯದರ್ಶಿ ಲತೀಶ್ ಪಾಪುದಡಿ ಮಾಡೂರುರವರು ಧನ್ಯವಾದ ಸಮರ್ಪಿಸಿದರು.