ಸಿಂಚನ ವಿಶೇಷಾಂಕ : 2017

ಚಾವಡಿಯ ನೆರಳಲ್ಲಿ ಒಂದಿಷ್ಟು ಮಾತುಕತೆ : ಅಮಿತಾಂಜಲಿ ಕಿರಣ್

         ಅಮಿತಾಂಜಲಿ ಕಿರಣ್

“ಬೇಡಗಳೆಡೆಯಲ್ಲಿ ಕಾಡಿದ ಬಯಕೆಗಳ…
ಸುಡುವ ಕಾವನು ಬೆಳೆಸಿ ಬೆಂದು ಕಳೆದ…
ಅಹಲ್ಯ, ತಾರಾ, ಸೀತೆ, ದ್ರೌಪದಿ, ಮಂಡೋದರಿಯರ
ನನ್ನ, ಅವಳ, ಇವಳ, ಮತ್ತೊಬ್ಬಳ, ಇನ್ನೊಬ್ಬಳ ಊರ್ಮಿಳಾಳ…
ಕತೆಯ ಕಾಯ್ವ, ಕೇಳ್ವ, ಸುಡುವ, ಬೆಳೆಸುವ ಹೊತ್ತು…”
ಮುಸ್ಸಂಜೆಯ ಮಾತು. ಕವಿತೆ ಹೊಸೆಯುವ ಹೊತ್ತು. ಕವಿತೆ ಗೀತೆಯರ ಮಾತುಕತೆ. ಕವಿತೆ ಕತೆಯಾಗುವ ಕತೆ. ಮಾತುಕತೆಯ ನಡುವೆ ಒಂದಿಷ್ಟು ಕಣ್ಣೀರು _ ಮತ್ತೊಂದಿಷ್ಟು ನೆನಪುಗಳು.
ಸಾಹುಕಾರ ಅಪ್ಪನ ದರ್ಪದ ಮಾತುಗಳಿಗೆ ಬೆದರಿದ ಹರಿಣಿ- ಅಮ್ಮ. ತುಂಬು ಸಂಸಾರಕ್ಕೆ ಸೊಸೆಯಾಗಿ ಬಂದವಳನ್ನು ಓಲೈಸುವವರಿಲ್ಲ. ಹೊಸಿಲು ದಾಟಬೇಡ, ಸ್ವರವನೆತ್ತಬೇಡ, ತಲೆ ಎತ್ತಿ ನೋಡಬೇಡ, ದನಿ ಎತ್ತಿ ನಗಬೇಡ… ಬೇಡ..ಬೇಡ..ಬೇಡ..
ಜಿಂಕೆಯ ಮರಿಗೂ ಅದೇ ಜೋಗುಳ. ಅಪ್ಪನ ದರ್ಪಕ್ಕೆ ಎತ್ತರಕ್ಕೆ ಬೆಳೆಯಲೂ ಭಯ. ಹರೆಯಕ್ಕೆ ಕಾಲಿಟ್ಟ ಬಳಿಕ ಜೊತೆಯಾದ ಗೆಳತಿಯರ ಜೊತೆಗೊಂದಿಷ್ಟು ಪಿಸು ಮಾತುಕತೆ. ಮದುವೆಯಾದ ಬಳಿಕವೂ ಮತ್ತದೇ ಪುನರಾವರ್ತನೆ. ಈಗ ಅಪ್ಪನಲ್ಲ, ಮಾವ, ಅತ್ತೆ ಮತ್ತು ಹಗಲು ಹೊತ್ತಿಗೆ ಗಂಡನೂ…ನಿಟ್ಟುಸಿರು ಬಿಟ್ಟು ಆ ಉಸಿರಿನೊಂದಿಗೆ ಕತೆಯನೆಲ್ಲ ಹೊರಹಾಕಿ ನಿರಾಳವಾಗಲು ಮುಸ್ಸಂಜೆಗಾಗಿ ಕಾಯಬೇಕಾಗಿತ್ತು. ಈಗ ಬೋಳುತಲೆ, ಬೊಚ್ಚುಬಾಯಿಗಳದೇ ಕಲರವ. ಮನಸ್ಸು ಮಾತ್ರ ನಿರಾಳ. ಬಂಧನ ಕಳಚಿದ, ವೇದನೆ ಮರೆತ, ಬಾಳದಾರಿಯ ಇನ್ನೊಂದು ಮಗ್ಗುಲಿಗೆ ಹೊರಳಿ ಕುಳಿತ ಹೊತ್ತು.

ಅಹಲ್ಯ, ತಾರಾ, ಮಂಡೋದರಿ, ಮಲ್ಲಮ್ಮ, ಗೀತಾ, ಕವಿತಾ ಮೈಯೆಲ್ಲಾ ಕಿವಿಯಾಗಿ ಕೂತಿದ್ದರೆ…. ಊರ್ಮಿಳೆ ಮಾತಿನ ಬುತ್ತಿ ಬಿಚ್ಚಿದಳು…. ಅಣ್ಣ ತಮ್ಮಂದಿರ ಮಕ್ಕಳಾದರೂ ಒಡ ಹುಟ್ಟಿದವರಂತೆ ಬೆಳೆದವರು ಸೀತೆ – ಊರ್ಮಿಳಾ. ಓರಗಿತ್ತಿಯರಾದ ಬಳಿಕ ಅಕ್ಕನಿಗೆ ತಂಗಿಯ ಮೇಲೆ ಮತ್ತಷ್ಟು ಕಾಳಜಿ. ಹೊಸಮನೆಯಲ್ಲಿ ಹೊಂದಿಕೊಳ್ಳುತ್ತಿದ್ದ ತಂಗಿಯನ್ನು ಹೆಜ್ಜೆ ಹೆಜ್ಜೆಗೂ ಕಾಳಜಿಯಿಂದ ಗಮನಿಸುತ್ತಿದ್ದ ಅಕ್ಕನಿಗೆ ವನವಾಸಕ್ಕೆ ಭಾವ ಹಾಗೂ ಮೈದುನನ ಜೊತೆಗೆ ಹೊರಟಾಗ ಮಾತ್ರ ಯಾಕೆ ತಂಗಿ ಮರೆತು ಹೋದಳೋ. “ನಾನೂ ನಿಮ್ಮ ಜೊತೆ ಬರುವೆ” ಎಂದು ಅಕ್ಕ ಭಾವನ ಹಿಂದೆ ಹೊರಟಾಗ ಅಕ್ಕನಿಗೆ ಬಂದ ಧೈರ್ಯ ನನಗೇಕೆ ಬರಲಿಲ್ಲ? ತನಗೇನಾದರೂ ಕರೆ ಬರಬಹುದೆಂದು ಆಸೆಗಣ್ಣಿನಿಂದ ಕಾದದ್ದೇ ಬಂತು. ಮೌನವಾಗಿ ಅಣ್ಣನ ಹೆಜ್ಜೆಯನ್ನನುಸರಿಸಿ ನಡೆದ ತಮ್ಮ ಲಕ್ಷ್ಮಣನನ್ನು ಕಂಡು “ಪುಕ್ಕಲ”ನೆನೆಸಿ ಸಿಟ್ಟು ಬಂದದ್ದು ಸುಳ್ಳಲ್ಲ. ಮರುಕ್ಷಣ ಏನೋ ಪಾಪ ಮಾಡಿದೆನೆನೆಸಿ ಒಳಗೆಲ್ಲಾ ನಡುಕ. ಮೌನವಾಗಿ ಮೈಮೇಲಿನ ಆಭರಣ, ಅರಮನೆಯ ಸುಖ(?)ವನ್ನೆಲ್ಲ ತ್ಯಜಿಸಿ ಅಕ್ಕ ಪತಿಯನ್ನನುಸರಿಸಿದಳು. ಜನರ ದೃಷ್ಟಿಯಲ್ಲಿ ಮಹಾಪತಿವ್ರತೆಯೆನಿಸಿಕೊಂಡಳು. ಆದರೆ ನನಗೆ ಗೊತ್ತಿತ್ತು. ಆ ವಯಸ್ಸಿನಲ್ಲಿ ಪತಿಯ ಸಂಗವೊಂದಿದ್ದರೆ ಈ ಎಲ್ಲಾ ಐಷಾರಾಮದ ಸುಖಭೋಗದ ವಸ್ತುಗಳು ಕಸಕ್ಕೆ ಸಮ ಎಂದು. ಅಕ್ಕ ನನ್ನೆಡೆ ದಿಟ್ಟಿಸಿ ನೋಡುವ ಧೈರ್ಯವನ್ನೆ ಮಾಡಲಿಲ್ಲ. ” ನೀನೂ ಜೊತೆಗೆ ಹೋಗು ” ಎಂದು ಹಿರಿಯರಾದರೂ ಅಂದಾರು ಎಂದುಕೊಂಡರೆ “ಊಹೂಂ” ಒಬ್ಬರದೂ ಸೊಲ್ಲಿಲ್ಲ…. ಎಲ್ಲರೂ ಕಂಬನಿಗಣ್ಣಿಂದ ಅವರು ಮೂವರಿಗೆ ವಿದಾಯ ಹೇಳುವ ಭರದಲ್ಲಿ ಬಡಪಾಯಿ ಈ ಒಂದು ಜೀವವನ್ನೆ ಮರೆತಿದ್ದರು. ಅರಮನೆಯ ಕಂಬಗಳ ಹಿಂದೆ, ಬಾಗಿಲಿನ ಎಡೆಯಲ್ಲಿ, ಸಖಿಯರ ಗುಂಪಿನ ನಡುವೆ, ಕೆಲಸದವರ ಮಧ್ಯೆ ನುಸುಳಿ ಹೆಬ್ಬಾಗಿಲವರೆಗೂ ಬಂದರೂ ಗಮನಿಸುವವರು ಯಾರೂ ಇರಲಿಲ್ಲ. ದುಃಖ ಒತ್ತರಿಸಿ ಬಂದರೂ ಭೋರೆಂದು ಅಳುವ ಹಾಗಿರಲಿಲ್ಲ. ಎಲ್ಲರಂತೆಯೇ ನಾನೂ ಅಳುತ್ತಿದ್ದೇನೆಂದುಕೊಂಡರು ಎಲ್ಲರೂ. ಆ ಬಳಿಕ ಅರಮನೆಯೊಳಗಿನ ಅಸಂಖ್ಯಾತ ದಾಸಿಯರ ನಡುವೆ ಅತ್ತೆ ಮಾವನ ಸೇವೆ ಮಾಡುವ ಪ್ರೀತಿಯ ಸೊಸೆಯಾಗಿ ಬಾಳಬೇಕಿತ್ತು. ಒಡಲೊಳಗಿನ ಬಯಕೆಗಳಿಗೆ ಬೆಂಕಿ ಇಟ್ಟು ಬದುಕು ಸವೆಸಬೇಕಿತ್ತು. ಹದಿನಾಲ್ಕು ವರುಷ ಅದೇ ರೀತಿ ಬದುಕು ಸವೆಸಿಯೂ ಆಗಿತ್ತು.

ಹದಿನಾಲ್ಕು ವರ್ಷಗಳ ಬಳಿಕ ಪತಿ ಲಕ್ಷ್ಮಣ- ಅಕ್ಕ ಸೀತೆ ಭಾವ ರಾಮನೊಂದಿಗೆ ಹಿಂದಿರುಗಿ ಬರುತ್ತಿರುವ ಸುದ್ದಿಗೆ ಊರಿಗೆ ಊರೇ ಬಣ್ಣ-ಬೆಳಕು-ತೋರಣಗಳಿಂದ ಸಿಂಗಾರಗೊಳ್ಳುತ್ತಿರುವಾಗ ಅರಮನೆಯ ಅಂತಃಪುರದಲ್ಲಿ ನಾನೂ ನಾಚಿ ಸಜ್ಜಾಗುತ್ತಿದ್ದೆ- ನನ್ನವನನ್ನು ಎದುರುಗೊಳ್ಳಲು. ಪನ್ನೀರ ಸ್ನಾನ ಮುಗಿಸಿ , ರೇಶಿಮೆಯ ವಸ್ತ್ರ ಧರಿಸಿ, ಸಖಿಯರಿಂದ ಒಡವೆ ವಸ್ತ್ರಗಳನ್ನೆಲ್ಲಾ ಹಾಕಿಸಿಕೊಂಡು ತುರುಬು ಕಟ್ಟಿಸಿಕೊಂಡು , ಹೂ ಮುಡಿಸಿಕೊಂಡು, ಮೈಗೆಲ್ಲಾ ಸುಗಂಧ ದ್ರವ್ಯವನ್ನು ಪೂಸಿಕೊಂಡು ಮೈಯೆಲ್ಲ ಪುಳಕವಾಗಿಸಿಕೊಂಡು ನನ್ನವರು ಬರುವ ವೇಳೆಗಾಗಿ ಕಾಯುತ್ತಿದ್ದರೇ….ಸಖಿ ತಂದಿರಿಸಿದ ನನ್ನಷ್ಟೆತ್ತರದ ಕನ್ನಡಿಯೊಳಗೆ …ಅಬ್ಬಬ್ಬಾ….ನೆನೆಸಿಕೊಂಡರೆ ಈಗಲೂ ಮೈ ಕಂಪಿಸುತ್ತದೆ. ಹದಿನಾಲ್ಕು ವರುಷಗಳ ಹಿಂದೆ ಪತಿಯನ್ನು ಬೀಳ್ಕೊಡುವಾಗ ತುರುಬು ಕಟ್ಟಲು ಹೆಣಗಾಡುತ್ತಿದ್ದ ಆ ಕಪ್ಪು ಗುಂಗುರು ಕೂದಲೆಲ್ಲಿ, ನುಣುಪಾದ ಬೆಣ್ಣೆಯಂತಿದ್ದ ಕೆನ್ನೆ ಎಲ್ಲಿ, ತೆಳ್ಳನೆ ಬಳ್ಳಿಯಂತೆ ಬಳುಕುತ್ತಿದ್ದ ಆ ದೇಹವೆಲ್ಲಿ … ನನ್ನ ದೇಹದ ಸೌಂದರ್ಯವೆಲ್ಲವೂ ಅಂದೇ ಲಕ್ಷ್ಮಣನ ಹಿಂದೆಯೇ ಸೋರಿ ಹೋಗಿತ್ತೇನೋ ಎಂದು ಭಾಸವಾಗತೊಡಗಿತು. ಈ ನನ್ನ ನರೆಗೂದಲು, ನೆರಿಗಟ್ಟಿದ ಕೆನ್ನೆಗಳು, ಕಪ್ಪುವರ್ತುಲದ ಕಣ್ಣುಗಳು, ಎಲ್ಲಕ್ಕೂ ಮಿಗಿಲಾಗಿ ಬೊಜ್ಜು ತುಂಬಿ ಮುದಿತನದ ಲಕ್ಷಣಗಳನ್ನು ತೋರಿಸುತ್ತಿದ್ದ ಈ ದೇಹ…….ಎಂತಹ ಭಯಾನಕ ಯೋಚನೆಯನ್ನು ತಲೆಯೊಳಗೆ ತುರುಕಿಸಿತ್ತು? ನನ್ನ ದೇಹವನ್ನು ಆ ಕನ್ನಡಿಯಲ್ಲಿ ನೋಡಿ ನನಗೇ ಭಯ ಹುಟ್ಟಿತ್ತು. ನನ್ನ ದೇಹದ ಭಾರವನ್ನು ಹೊರಲು ನನಗೇ ಅಸಾಧ್ಯವೆನಿಸಿ ಕುಸಿಯತೊಡಗಿದೆ. ಲಕ್ಷ್ಮಣ ನನ್ನನ್ನು ಯಾವ ರೀತಿಯಲ್ಲಿ ಸ್ವೀಕರಿಸಬಹುದೆಂಬ ಭಯ ಗಾಢವಾಗಿ ಕಾಡಿತ್ತು. “ಬೇಡ”ಗಳ ನಡುವೆ ಬೆಳೆದ ಯಾವ ಬೆಡಗಿಗೂ ಇಂತಹ ಬದುಕು ಬೇಡ.
ನಿಟ್ಟುಸಿರು ಮತ್ತೆ ಗಾಢವಾಗಿ ನದಿಯಾಗಿ, ಸಾಗರವಾಗಿ ಎಲ್ಲರನ್ನು ತೋಯಿಸಿತ್ತು. ಮೌನ ಆವರಿಸಿತ್ತು. ಗಂಟೆಗಳ ಕಾಲ ಮಂಥನದ ಬಳಿಕ ಮಲ್ಲಮ್ಮನ ಸರದಿ.
ಹಳ್ಳಿಗಾಡಿನಲ್ಲಿ ಹುಟ್ಟಿದವಳಿಗೆ ಅಲ್ಲಿ ಮೂಢನಂಬಿಕೆಗಳ ನಡುವೆ “ಬೇಡ”ಗಳ ಸುರಿಮಳೆ. ಅಪ್ಪನ ಹೆಸರಿಲ್ಲದೆ ಹುಟ್ಟಿದವಳಿಗೆ ಸೋದರ ಮಾವಂದಿರ ಕಟ್ಟುನಿಟ್ಟಿನ ಕಾವಲಿನ ನೆಪದಲ್ಲಿ ಇನ್ನೂ ಏನೇನೋ ಪಾಠಗಳು. ಅರ್ಥವಾಗದ ವಯಸ್ಸಿನಲ್ಲೂ “ಯಾರಲ್ಲೂ ಹೇಳಬೇಡ” ಮಾತ್ರ ಅರ್ಥವಾಗಿತ್ತು. ಮುದಿವಯಸ್ಸಿನವರೆಗೂ ಶ್ರೀಮತಿಯಾಗದೆಯೇ ಕಳೆಯಬೇಕಾದ ಅನಿವಾರ್ಯತೆ. ಭಾಗಭಾಗವಾಗಿ ಸುಡುತ್ತಿದ್ದ ನೆನಪುಗಳನ್ನೆಲ್ಲ ಗೆಳತಿಯರ ಮುಂದೆ ಸುರಿದು ಹರಿಯ ಬಿಟ್ಟ ಮೇಲೆ ಹಗುರಾದ ಅನುಭವ.
ಬೆಳೆದು ನಿಂತ ಮಕ್ಕಳೇನಾದರೂ ” ಇಲ್ಲಿ ಕೂತಿರಬೇಡಮ್ಮ. ಮನೆಗೆ ಬಾ” ಎಂದು ಕರೆಯಲು ಬಂದಾರೆಂಬ ಭಯದಿಂದಲೇ ಆರಂಭವಾಗಿತ್ತು ಕವಿತಾಳ ಕತೆ. ಅಬ್ಬರದ ಬದುಕಲ್ಲ ಅದು….ಸದ್ದಿಲ್ಲದ ಮುದ್ದು. “ಮಗಳೇ ಅಲ್ಲಿ ಹತ್ತಬೇಡ…ಇಲ್ಲಿ ಇಳಿಯಬೇಡ” “ಅವರ ಜೊತೆ ಮಾತು ಬೇಡ..ಇವರ ಜೊತೆ ಕೂಟ ಬೇಡ…” ಬೆಳೆಯುತ್ತಿದ್ದಂತೆ ಕಾಳಜಿಯ…ಆತಂಕದ “ಬೇಡ”ಗಳು- “ಸಂಜೆ ತಡ ಮಾಡಬೇಡ” “ಹೊರಗಡೆ ಏನನ್ನೂ ತಿನ್ನಬೇಡ” “ಬಸ್ಸಿಗಾಗಿ ಕಾಯುತ್ತಾ ನಿಲ್ಲಬೇಡ” “ಜೋರಾಗಿ ನಗಬೇಡ” ಅಯ್ಯೋ ಎಷ್ಟೊಂದು “ಬೇಡ”ಗಳ “ಬೇಡಿ”. ಮದುವೆಯಾದ ಮೇಲೇನು ಸ್ವಾತಂತ್ರ್ಯವೇ…”ಆಚೆ ಮನೆಯವರೊಂದಿಗೆ ಮಾತುಕತೆ ಬೇಡ” “ಸಂಬಂಧಿಗಳ ಮನೆಗೆ ಆಗಾಗ ಹೋಗಬೇಡ” “ಕಚೇರಿ ಕೆಲಸ- ದುಡಿಮೆ,ಸಂಪಾದನೆ ಬೇಡವೇ ಬೇಡ” “ಹೊರಗಡೆ ಹೆಚ್ಚು ಓಡಾಟ ಬೇಡ” “ದುಂದು ವೆಚ್ಚ ಮಾಡಬೇಡ” ಹೀಗೆ. ಮಕ್ಕಳು ಬೆಳೆದು ನಿಂತ ಬಳಿಕ ….ಅದೂ ಅಂತಹುದೇ ಕತೆ- “ಅಮ್ಮಾ …ಎಲ್ಲರೆದುರು ಹಾಗೆನ್ನಬೇಡ..” “ಅಲ್ಲಿಗೆ ಅಪ್ಪನ ಜೊತೆ ನೀ ಬರಬೇಡ…” ಈ “ಬೇಡ”ಗಳ ಚೂರಿ ಚುಚ್ಚಿ ಚುಚ್ಚಿ ಇರಿದು ಹಿಂಸೆ ಕೊಟ್ಟದ್ದು ಯಾರಿಗೂ ತಿಳಿಯಲೇ ಇಲ್ಲ.

ಚಾವಡಿಯ ನೆರಳಲ್ಲಿ ಜಗಲಿ ಮೇಲಿನ ಮಾತುಗಳು- ಅವಳದ್ದು ಇವಳದ್ದು ಎಂಬ ಭೇದವಿಲ್ಲದೆ ಪರಸ್ಪರ ಸ್ಪಂದಿಸಿ ನಿಟ್ಟುಸಿರಿನೊಂದಿಗೆ ಕೊನೆಗೊಂಡು ಮೌನಕ್ಕೆ ಶರಣಾದ ಒಂದೊಂದು ಜೀವಕ್ಕೂ ನಿರಾಳ ಭಾವವನ್ನು ನೀಡುತ್ತಿದ್ದ ಮುಸ್ಸಂಜೆ ಮತ್ತೆ ಜಾರಿ ಕತ್ತಲಾಗಿ ಮತ್ತೊಂದು ಸಂಜೆಗಾಗಿ ಕಾಯುವಂತೆ ಮಾಡಿತ್ತು.
[ಹೊಟ್ಟೆಯೊಳಗಿನ ದುಗುಡವನ್ನೆಲ್ಲಾ ಬಿಚ್ಚಿಟ್ಟ ಇಂದಿನ, ಹಿಂದಿನ, ಪುರಾಣದ, ಇತಿಹಾಸದ, ವಾಸ್ತವದ, ಕಲ್ಪನೆಯ ಹೆಂಗಳೆಯರೆಲ್ಲಾ ಒಂದೆಡೆ ಸೇರುವ ಅವಕಾಶ ಸಿಕ್ಕಿದರೆ ಯಾವ ರೀತಿಯಲ್ಲಿ ತಮ್ಮ ನೋವನ್ನೆಲ್ಲಾ ಹಂಚಿ ಹಗುರಾದಾರೆಂಬ ಒಂದು ಕಲ್ಪನೆಯ ಚಿತ್ರಣ.

One thought on “ಚಾವಡಿಯ ನೆರಳಲ್ಲಿ ಒಂದಿಷ್ಟು ಮಾತುಕತೆ : ಅಮಿತಾಂಜಲಿ ಕಿರಣ್

  1. “ದ್ವಾಪರಾಯುಗದ ಊರ್ಮಿಳೆಯ ಅಂತರಾಳದ ಸ್ವಗತದಲ್ಲಿ ಸ್ತ್ರೀ ಕುಲಕ್ಕೆ ಅಂಟಿ ಬಂದ ವ್ಯಾಕುಲತೆಗಳೇ ಇಂದಿನ ಮಹಿಳೆಯ ಬದುಕು ಕೂಡಾ. ಅದಿನ್ನೂ ಪೂರ್ಣವಾಗಿ ಬದಲಾಗಿಲ್ಲ!” ಎನ್ನುವ ನೋವನ್ನು ಅನಾವರಣಗೊಳಿಸುವ ಹೃದಯಸ್ಪರ್ಶಿ ಬರಹ ಮೇಡಮ್. ಶುಭಾಶಯ…

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!