ಯುವವಾಹಿನಿಯ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು
ಕಳೆದ ಹಲವು ವರುಷದಲ್ಲಿ ನೂರಾರು ಸಂಘಟನೆಗಳಲ್ಲಿ ಒತ್ತಡದ ಕೆಲಸ, ಆಗೆಲ್ಲ ನನ್ನ ಮಡದಿಯ ಮುನಿಸು ನಿಮಗೆ ಇದೆಲ್ಲ ಬೇಕಾ ? ಆಗೆಲ್ಲಾ ಗೊತ್ತಿಲ್ಲದಿದ್ದರೂ ಹಾಡೊಂದ ಗುಣುಗುತ್ತಿದ್ದೆ ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೇ …. ಏನಾಶ್ಚರ್ಯ ಈಗ ಒಂದೇ ಒಂದು ದಿನವೂ ವಿಶ್ರಾಂತಿ ಇಲ್ಲ. ನನ್ನ ಯುವವಾಹಿನಿಯ ಕುಟುಂಬ ನನಗೆ ವಿಶ್ರಾಂತಿಯನ್ನೂ ನೀಡದೆ ದಿನಕ್ಕೊಂದು ಮನೆಗೆ (ಘಟಕ) ಆಹ್ವಾನಿಸುತ್ತಲೇ ಇದ್ದಾರೆ. ಒಂದಕ್ಕಿಂತ ಒಂದು ಘಟಕದ ಭಿನ್ನ ಭಿನ್ನ ಕಾರ್ಯಕ್ರಮ, ಪ್ರತಿ ದಿನಾ ನಾಳೆಯ ಚಿಂತನೆಗಳು. ಬೆಳಗ್ಗೆ ಸೂರ್ಯ ಮೂಡುವ ಮುನ್ನ ಮನೆ ಬಿಟ್ಟರೇ ಮತ್ತೆ ಬರುವುದು ಸೂರ್ಯ ಮುಳುಗಿ ತಾಸ ಕಳೆದ ಮೇಲೆಯೇ, ಆದರೂ ಹೆಂಡತಿಯ ಮುನಿಸಿಲ್ಲ, ಆಕೆಯ ಮೊಗದಲ್ಲಿ ನಗುವಿಗೆ ಬರವಿಲ್ಲ. ಹೌದು, ಯುವವಾಹಿನಿ ನಮ್ಮನ್ನೂ ಮಾತ್ರವಲ್ಲ ನಮ್ಮ ಮನೆಯವರನ್ನೂ ಬಿಡುವುದಿಲ್ಲ, ಅದೊಂದು ರೀತಿಯ ಮೋಹ ಮಾಯೆ, ಅದು ನನ್ನದೇ ಕುಟುಂಬ ಛಾಯೆ. ಯುವವಾಹಿನಿ ಕುಟುಂಬದಲ್ಲಿ ಅಪರಿಚಿತ ಎಂಬ ಶಬ್ದವೇ ಇಲ್ಲ. ನನಗೆ ಏನಿದ್ದರೂ ಹಿರಿಯಣ್ಣನ ಸ್ಥಾನ. ಯುವವಾಹಿನಿಯ ಕುಟುಂಬ ತೋರುವ ಪ್ರೀತಿ, ಪ್ರೇಮ, ಗೌರವ ನಮ್ಮ ಮನೆ ಮನಸನ್ನು ತಲುಪುತ್ತದೆ. ನನಗೆ ನೆನಪಿದೆ ಆಗಸ್ಟ್ 5ರ ಬಳಿಕ ಮನೆಮಂದಿಗೆ ನಾನು ದಿನವನ್ನು ನೀಡಿದ್ದೇ ವಿರಳ, ನನ್ನ ಮೊಬೈಲ್ ಸೈಲೆಂಟ್ ಆಗಿದ್ದೇ ಕಡಿಮೆ. ನನ್ನ ವೃತ್ತಿ, ನನ್ನ ಕುಟುಂಬ, ನನ್ನ ಇತರ ವ್ಯವಹಾರಗಳ ಬಗ್ಗೆ ಮಾತಾಡಿದ್ದೇ ವಿರಳ. ಏಕೆಂದರೆ ನನ್ನ ಮುಂದೆ ನನ್ನ ಯುವವಾಹಿನಿ ಎಂಬ ಪ್ರಪಂಚ ಅಗಾಧವಾಗಿ ಬೆಳೆಯುತ್ತಿದೆ. ಗ್ರಾಮ ಗ್ರಾಮ, ತಾಲೂಕು ಕೇಂದ್ರದಲ್ಲಿರುವ ಪ್ರತಿಯೊಬ್ಬ ಸಾಮಾನ್ಯ ಸದಸ್ಯನೂ ಯುವವಾಹಿನಿ ಬಗ್ಗೆ ಚಿಂತಿಸುವಾಗ ಅದರ ಚುಕ್ಕಾಣಿ ಹಿಡಿದ ನಾನು ಯಾವ ರೀತಿ ಕೆಲಸ ಮಾಡಬೇಕಾದೀತು ? ಅದನ್ನು ಯೋಚಿಸಲೂ ಸಾಧ್ಯವಿಲ್ಲ, ಅಷ್ಟು ದುಡಿಮೆ ನನ್ನಿಂದ ಆಗಬೇಕಿದೆ. ಆದರೆ ನನ್ನಿಂದ ಅಷ್ಟು ಕೆಲಸ ಮಾಡಲು ಯುವವಾಹಿನಿಯ ಎಲ್ಲಾ ಸದಸ್ಯರ ಸಹಕಾರದ ನೀರಿಕ್ಷೇಯಲ್ಲಿದ್ದೇನೆ. ಯುವವಾಹಿನಿ ಕುಟುಂಬವನ್ನು ಸಂಪರ್ಕಿಸುವುದರಲ್ಲೇ ನನ್ನ ಬಹುತೇಕ ಸಮಯ ಕಳೆಯುತ್ತಿದೆ. ನನಗೆ ಈ ಅಧ್ಯಕ್ಷಗಾದಿಯ ಗೌರವ ದೊರೆತು, ಎಲ್ಲಾ ಕಡೆ ಗೌರವ ಸಿಗುತ್ತಿದೆ ಎಂದರೆ ಅವರು 31 ವರುಷದ ಮಹಾ ತಪಸ್ಸಿನ ಫಲ.
ನಾನು ಅಧಿಕಾರ ಸ್ವೀಕರಿಸಿ ಮೂರೂವರೆ ತಿಂಗಳು ಕಳೆದಿದೆ. ನನಗನಿಸುತ್ತಿದೆ ಮೂರುವರೇ ದಿನ ಕಳೆಯಿತೆಂದು. ಅಲ್ಲಲ್ಲಿ ಒಂದು ಪಿಸು ಮಾತು ಕೇಳುತ್ತಿದೆ. ಯುವವಾಹಿನಿಯ ಈ ವರ್ಷದ ಹೊಸತೇನು? ಏಕೆಂದರೆ ಕಳೆದ ವರ್ಷ ಯಶವಂತಣ್ಣ ಪಾದರಸದಂತೆ ಓಡಾಡಿ ಎಲ್ಲರನ್ನೂ ಬಡಿದೆಬ್ಬಿಸಿ, ಹೊಸತನಗಳನ್ನು ಸೃಷ್ಟಿಸಿ ಯುವ ಸಂಚನಲ ಉಂಟು ಮಾಡಿದ್ದರು. ಇಂದು ಎಲ್ಲರೂ ಅದೇ ದೃಷ್ಟಿಯಲ್ಲಿ ಯೋಚಿಸುತ್ತಿದ್ದಾರೆ. ಹಾಗಾಗಿ ನಾವು ಮೊಸರಿನ ಗಡಿಗೆಗೆ ಕಡೆಗೋಲು ಹಾಕಿದ್ದೇವೆ. ಮಂಥನ ಆರಂಭಗೊಂಡಿದೆ, ಸದ್ಯವೇ ಬೆಣ್ಣೆ ದಕ್ಕುತ್ತದೆ. ಅಂದರೆ ಹೊಸತನದ ತುಡಿತದೆಡೆಗೆ ನಮ್ಮ ನಡಿಗೆ ಆರಂಭಗೊಂಡಿದೆ. ಈ ಹಿಂದಿನ ಸಾಲಿನ ಕಾರ್ಯಕ್ರಮದ ಜೊತೆಜೊತೆಗೆ ನಿಮ್ಮಲ್ಲೆರ ಸಲಹೆ ಮತ್ತು ಬೆಂಬಲದಿಂದ ಹೊಸ ಕಾರ್ಯಕ್ರಮಗಳಿಗೆ ಚೌಕಟ್ಟು ನಿರ್ಮಾಣಗೊಳ್ಳುತ್ತಿದೆ.
ಯುವವಾಹಿನಿಯ 33ನೇ ನೂತನ ಘಟಕ ಪೆರ್ಮುದೆ ಎಕ್ಕಾರು ಘಟಕ ಉದ್ಘಾಟನೆಗೊಂಡಿದೆ. ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಜರುಗಿದ ಕುಣಿತ ಭಜನಾ ಸ್ಪರ್ಧೆ ಸದಸ್ಯರಲ್ಲಿ ಹೊಸ ಸಂಚಲನಾ ಮೂಡಿಸಿದೆ. ಒಂದು ಐತಿಹಾಸಿಕ ಉದ್ಯೋಗ ಮೇಳಕ್ಕೆ ಸಿದ್ದತೆ ನಡೆಯುತ್ತಿದೆ, ಬೆಂಗಳೂರು ಘಟಕ ಆತಿಥ್ಯದ ಹೊಣೆ ಹೊತ್ತಿದೆ. ಉಳಿದಂತೆ ವಧುವರರ ಅನ್ವೇಷಣೆ, ವ್ಯಕ್ತಿತ್ವ ವಿಕಸನ ಶಿಬಿರ, ರಸಪ್ರಶ್ನೆ, ಕ್ರೀಡಾಕೂಟಗಳು, ಡೆನ್ನಾನ ಡೆನ್ನನ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ಮತ್ತು ಕಳೆದ ವರುಷದ ಅತ್ಯುತ್ತಮ ಕಾರ್ಯಕ್ರಮ ಚತುರ್ಮುಖಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಹೀಗೆ ಸಾಲು ಸಾಲು ಕಾರ್ಯಕ್ರಮಗಳಿಂದ ಯುವವಾಹಿನಿ ವರುಷದ ಕ್ಯಾಲೆಂಡರ್ ತುಂಬಿದೆ. ಒಂದೇ ಒಂದೇ ಭಾನುವಾರ ಫ್ರೀ ಇಲ್ಲ. ನಾವೆಲ್ಲ ಒಂದಲ್ಲೊಂದು ಕಡೆ ಜೊತೆಯಾಗುತ್ತಲೇ ಇರುತ್ತೇವೆ. ಒಂದು ಕುಟುಂಬ ಪ್ರೀತಿ ನೀಡಲು ಎಲ್ಲಾ ಘಟಕ ತುದಿಗಾಲಲ್ಲಿ ನಿಂತಿದ್ದೇವೆ. ಒಂಜಿ ಐತಾರ ಇನಿ ಆಂಡಲಾ ಇಲ್ಲಡ್ ಕುಲ್ಲುಗಾ … ಎಂಬ ಮಾತು ಯುವವಹಿನಿ ಸದಸ್ಯರಿಂದ ಬರುತ್ತಿಲ್ಲ ಏಕೆಂದರೆ ನಾವೆಲ್ಲ ಭಾನುವಾರಕ್ಕೆ ಕಾಯುತ್ತಿದ್ದೇವೆ ಜೊತೆಯಾಗೋಣ ಎಂದು. ಈ ಪ್ರೀತಿ ಹೀಗೆ ಇರಲಿ ಸ್ನೇಹಿತರೇ ನಾವು ಇಲ್ಲವಾದರೂ ಶಾಶ್ವತವಾಗಿ ಇರುವುದು ಈ ಸ್ನೇಹ ಮಾತ್ರ.
ಯುವ ಸಿಂಚನದ ಸಂಪಾದಕರು ಸಕಾಲದಲ್ಲಿ ಅದೂ ಅಚ್ಚುಕಟ್ಟಾದ ಸಂಗ್ರಹ ಯೋಗ್ಯ ಯುವ ಸಿಂಚನವನ್ನು ನಮ್ಮ ಕೈಗಿತ್ತಿದ್ದಾರೆ. ನಮ್ಮ ಅವಧಿಯ ಎರಡನೆ ಸಂಚಿಕೆ ನೋಡಲು ಖುಷಿಯಾಗುತ್ತಿದೆ. ಜೊತೆಯಾಗಿ ಮುನ್ನಡೆಯೋಣ ಎಂದು ಆಶಿಸುತ್ತೇನೆ.
ಯುವವಾಹಿನಿಯಲ್ಲಿ ನಿಮ್ಮವ – ಜಯಂತ ನಡುಬೈಲ್