ವಿದ್ಯಾತುರರಿಗೆ ನೆಮ್ಮದಿಯಾಗಲೀ ನಿದ್ರೆಯಾಗಲೀ ಇರದು – ಇದು ನಮ್ಮ ಜ್ಞಾನಾರ್ಜನೆಗೆ ಸಂಬಂಧಪಟ್ಟ ಒಂದು ಮಾತು. ಜ್ಞಾನ ದೇಗುಲ ನಮ್ಮ ಭಾರತ. ಸಾವಿರಾರು ವರ್ಷಗಳಿಂದ ಜಗತ್ತಿಗೆ ಶುದ್ಧ ಜ್ಞಾನ, ವಿಜ್ಞಾನವನ್ನು ಪ್ರಸಾರ ಮಾಡುತ್ತಾ ವಿಶ್ವದ ಎಲ್ಲ ಮಾನವ ಜನಾಂಗವನ್ನು ಶ್ರೇಷ್ಠರನ್ನಾಗಿ ಸುಸಂಸ್ಕøತರನ್ನಾಗಿಸುವುದರಲ್ಲಿ ಭಾರತೀಯ ಸಂಸ್ಕøತಿ ಗುರುತಿಸಲ್ಪಟ್ಟಿದೆ. ನಮ್ಮಲ್ಲಿರುವ ಮೆದುಳು ಪ್ರಪಂಚದಲ್ಲಿರುವ ಯಾವುದೇ ಅತ್ಯಂತ ಪ್ರಬಲ ಆಧುನಿಕ ಗಣಕ ಯಂತ್ರಕ್ಕಿಂತ ಹೆಚ್ಚು ಸಂಕೀರ್ಣ, ಬಲಶಾಲಿ ಎಂದು ಗುರುತಿಸಲ್ಪಟ್ಟಿದೆ. ಇದರ ಇನ್ನೊಂದು ರೂಪ “ಕಾಮಾತುರಾಣಾಂ ನಭಯಂ ನಲಜ್ಜಾ” ಇದು ಬಯಕೆಗಳ (ಕಾಮಗಳ) ಆತುರತೆಗೆ ಸಿಲುಕಿದರೆ ಭಯವಾಗಲೀ, ಲಜ್ಜೆಯಾಗಲಿ ಮರೆಯಾಗುವ ಸನ್ನಿವೇಶ, ಇದಕ್ಕೆ ಹೊರತಾದ ಚಿಂತನೆ ನಮ್ಮದು.
ಮನಸ್ಸು ಬಯಕೆಗಳ ಗೂಡು ಅದರ ಹಿಡಿತದಲ್ಲಿ ತುಡಿಯುವುದು ನಮ್ಮ ದೇಹದ ಇಂದ್ರಿಯಗಳು. ಈ ತುಡಿತದ ಫಲ ನಮ್ಮ ಮನಸ್ಸಿನ ಮೂಲಕ ಸಾಗಿ ಜೀವಾತ್ಮನನ್ನು ಸೇರಿಕೊಳ್ಳುವುದು. ಈ ಬಯಕೆಗಳು ನೋಟದ, ಶ್ರವಣದ, ಆಫ್ರಾಣದ, ಊಟ-ಆಟಗಳ ಪರಿಣಾಮ. ಈ ಎಲ್ಲ ಅವ್ಯಕ್ತ ಬಯಕೆಯ ವ್ಯಕ್ತ ರೂಪವು ಕರ್ಮವಾಗಿರುವುದು. ಆದುದರಿಂದ ಮಾನವನ ಬಾಹ್ಯ ಕರ್ಮಗಳ ಮೊತ್ತ ಹಾಗೂ ರೂಪಾಂತರವೇ ಅವನ “ಬದುಕು” ಎನಿಸುತ್ತದೆ. ಹಾಗೆ ಮಾನವನ ಬದುಕು ಸಾಗುವುದು ಬಯಕೆಯಿಂದಾದರೆ ಬಯಕೆ ಸಾಕಾರಗೊಳ್ಳುವುದು ಬದುಕಿನಿಂದ. ಇದರಿಂದ ಬಯಕೆ ಮತ್ತು ಬದುಕು ಪರಸ್ಪರ ಪೂರಕವೆಂದು ಸಿದ್ದವಾಗುವುದು ಈ ಬಯಕೆಗಳ ನಿಗ್ರಹದಿಂದ ಕರ್ಮ ನಿಯಂತ್ರಣ ಸಾಧಿಸಿದರೆ ಬದುಕು ಸಾರ್ಥಕವಾಗುವುದು. ಈ ಬಯಕೆಗಳು ಸಂಪತ್ತಿನಾಚೆ ಹೊರಳಿದಾಗ ಅದರ ಗಳಿಕೆಗಾಗಿ ಹಗಲಿರುಳು ಓಡಾಟ, ಪರದಾಟ, ಹಾರಾಟ, ಹೋರಾಟ ನಡೆಸುವವು. ಹೀಗೆ ಇತಿಮಿತಿ ಇಲ್ಲದೆ ಬಯಕೆಗಳ ಬೆನ್ನೇರಿದರೆ ಬದುಕಿನಲ್ಲಿ ಶಾಂತಿಯು ಮರೀಚಿಕೆಯಾಗುವುದು.
ಆದುದರಿಂದ ಬಯಕೆಗಳ ತುಲನೆಯಿಂದ ಕರ್ಮವನ್ನು ನಡೆಸುವಲ್ಲಿ “ವಿದ್ಯೆ”ಯ ಪಾತ್ರ ಮಹತ್ತರವಾಗಿರುತ್ತದೆ. ವಿದ್ಯೆ ಇದ್ದರೆ ಮಾತ್ರ ಸ್ವತಂತ್ರ ಚಿಂತನೆ ನಡೆಸಬಹುದು. “ವಿದ್ಯೆಯಿಂದ ಸ್ವತಂತ್ರರಾಗಿರಿ” ಎನ್ನುವ ಗುರುವರ್ಯರ ಮಾತು ಇದನ್ನೇ ತೋರಿಸುತ್ತದೆ. ಹಾಗೆ ವಿದ್ಯೆಯ ಬಗ್ಗೆ “ಆತುರತೆ” ನಮ್ಮನ್ನು ಬದುಕಿನ ಸಾರ್ಥಕತೆಯೆಡೆಗೆ ಒಯ್ಯುವುದು. ಈ ಬದುಕು ನಮಗೆ ಅನಾಯಾಸವಾಗಿ ಸಿಕ್ಕವರ ಜೀವನದ ಪ್ರತಿಕ್ಷಣವೂ ಅಮೂಲ್ಯ. ಹಾಗೆಯೇ ಇಂದಿನ ದಿನವೆಂಬುದು ದೇವರು ನಮಗೆ ನೀಡಿದ ಉಡುಗೊರೆ. ಈ ದಿನದ ಪ್ರತಿಕ್ಷಣವನ್ನು ಬದುಕಿನ ಸುವರ್ಣ ಅವಕಾಶವೆಂದು, ಅಮೂಲ್ಯ ಭಾಗವೆಂದು ತಿಳಿದು ಜಾಗ್ರತೆಯಾಗಿ ಬಳಸಿಕೊಳ್ಳುವುದು ಅತೀ ಅಗತ್ಯ. ಇದು ವಿದ್ಯೆಯ ಆತುರತೆಯ ಮುಖೇನ ಸಾಧ್ಯ. ಕೇವಲ ಸುಖಭೋಗಗಳಿಗೆ ಆತುರ ಪಟ್ಟರೆ ಸುಖ, ವಿದ್ಯೆಗಳಿಗೆ ಬಲಿ ಬಿದ್ದರೆ ಬದುಕು ವ್ಯರ್ಥವಾಗುವುದು ಮಾತ್ರವಲ್ಲದೆ ಮೌಲ್ಯಯುತ ಬದುಕು ದೂರವಾಗುವುದು.
ಮೌಲ್ಯಗಳು ಮಾನವನ ಉತ್ತಮ ಬದುಕಿಗೆ ಬುನಾದಿಯಾಗಿದ್ದು, ಅವುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಬದುಕು ಗೌರವಯುತವಾಗಿ ಸಾಗುವುದು. “ವಿದ್ಯೆಯ ತುಡಿತ ಇದಕ್ಕೆ ಪೂರಕ. ಈ ಲೋಕವು ಜ್ಞಾನದಿಂದ ಆಳಲ್ಪಡುತ್ತದೆ. ಮನುಷ್ಯನ ಜೀವನದಲ್ಲಿ ಅನುಕೂಲ ಆಪತ್ತುಗಳು ಸಹಜ. ಆದರೆ ಆಪತ್ಕಾಲದಲ್ಲಿ ನಮ್ಮ ಜೊತೆಗಿರುವುದು ನಮ್ಮ ವಿದ್ಯೆ ಹಾಗೂ ಜ್ಞಾನ. ಅನೇಕತೆಯಲ್ಲಿ ಏಕತೆಯನ್ನು ಕಾಣುವ ವೈವಿಧ್ಯಮಯವಾದ ಧಾರ್ಮಿಕ ಸಿದ್ಧಾಂತಗಳನ್ನು ಹೊಂದಿದ ಭರತ ಖಂಡದಲ್ಲಿರುವಷ್ಟು ಸಂಖ್ಯೆಯ ವಿದ್ಯಾವಕಾಶ, ಸಾಂಸ್ಕøತಿಕ ಅವಕಾಶ, ಔದ್ಯೋಗಿಕ ಅವಕಾಶ, ಧಾರ್ಮಿಕ ಭಾವನೆ ಬೇರೆಲ್ಲಿಯೂ ಅಲಭ್ಯ. ಜ್ಞಾನದ ತೃಷೆಯುಳ್ಳವರಿಗೆ ವಿದ್ಯೆ, ಜ್ಞಾನವನ್ನು ಗಳಿಸುವ ಅವಕಾಶ ಸಾಕಷ್ಟಿದೆ. ಹೇಗೆ ದುಂಬಿಯೊಂದು ಹೂವಿಗೆ ನೋವಾಗದಂತೆ ಅದರಲ್ಲಿರುವ ಮಕರಂದ (ಮಧು)ವನ್ನು ಹೀರುತ್ತದೋ ಅದೇ ರೀತಿ ಸಾರ ಸಂಗ್ರಹ ಮಾಡುವಾಗ ಜ್ಞಾನಿಗಳು ಯಾರಿಗೂ ನೋಯಿಸುವುದಿಲ್ಲ. ಹೀಗೆಯೇ ಸಾಧನೆ ಮುಂದುವರಿಸುತ್ತಾರೆ.
ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಸಿಲೆಬಸ್‍ನಲ್ಲಿರುವ ಶಿಕ್ಷಣದಿಂದ ಯಶಸ್ಸಿನೆಡೆಗೆ ಸಾಗಲು ಸಾಧ್ಯವಿಲ್ಲ. ನಾಲ್ಕುಗೋಡೆಯ ಹೊರಗಡೆ ಹೋಗಿ ಬದುಕಿನ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯುವಂತಾಗಬೇಕು. ಅದರೊಂದಿಗೆ ಪಠ್ಯದ ಜೊತೆಗೆ ಮನಸ್ಸು ಕಟ್ಟುವ, ಮೌಲ್ಯಗಳನ್ನು ಬಿತ್ತುವ ಕಾರ್ಯಗಳು ನಡೆದರೆ ಅದೇ ವಿದ್ಯಾರ್ಥಿಗಳು ಮುಂದೆ ಸಮಾಜದ ಆಧಾರಸ್ಥಂಭಗಳಾಗಿ ರೂಪುಗೊಳ್ಳುತ್ತಾರೆ. ಅದನ್ನೇ ಡಾ| ಶಿವರಾಮ ಕಾರಂತರು ಹೇಳಿರುವುದು-ಮಕ್ಕಳಿಗಾಗಿ ಆಸ್ತಿಯನ್ನು ಕೊಡಿಸಬೇಡಿ, ಅವರನ್ನೇ ಮುಂದಿನ ಆಸ್ತಿಯನ್ನಾಗಿ ಮಾಡಿ, ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿಸಲು ಅವರಿಗೆ ಸೂಕ್ತವಾದ ಶಿಕ್ಷಣ ನೀಡುವಂತಹ ವಾತಾವರಣ ನಿರ್ಮಾಣವಾಗಬೇಕು. ಗುರುಹಿರಿಯರನ್ನು ಗೌರವಿಸುವ ಸಂಸ್ಕøತಿ, ಬದುಕಿನಲ್ಲಿ ಪ್ರಾಮಾಣಿಕತೆ, ಸ್ವಾವಲಂಬನೆಯಂತಹ ಗುಣಗಳು ಬಾಲ್ಯದಿಂದಲೇ ಬೆಳೆಯಬೇಕು. ರೋಗರಹಿತ ಸಮಾಜ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆ ಬೇಕು-ನಂಬಿಕೆಬೇಕು.
ಪ್ರತಿಯೊಬ್ಬರಿಗೂ ತಮ್ಮದೇ ಆದ ಇಷ್ಟವಾದ ಚಟುವಟಿಕೆ ಇದ್ದೇ ಇರುತ್ತದೆ. ಅಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮೈಮನಸ್ಸುಗಳು ಉಲ್ಲಾಸ-ಉತ್ಸಾಹಗಳನ್ನು ಪಡೆದುಕೊಳ್ಳುತ್ತವೆ. ಹಾಗೆಯೇ ನಮ್ಮೆಲ್ಲರಲ್ಲೂ ನಮಗೆ ಹಿತಕರ ಅನುಭವ ನೀಡುವಂತಹ ವಿಶೇಷ ಚಟುವಟಿಕೆಯ ಸ್ಫೂರ್ತಿಯೊಂದು ಇರುತ್ತದೆ. ಈ ಸ್ಪೂರ್ತಿಯೇ ನಮಗೆ ಸುರಕ್ಷಿತ ಭಾವ ನೀಡುವುದು ಈ ಸ್ಪೂರ್ತಿಯ ಹಿನ್ನೆಲೆಯಲ್ಲಿ ಶರೀರ ಮತ್ತು ಮನಸ್ಸಿನ ಸಂಬಂಧ ಸಮತೋಲನದಲ್ಲಿ ಇರುವ ಹಾಗೆ ನೋಡಿಕೊಳ್ಳುವುದು ಅಗತ್ಯ. ನಮ್ಮಲ್ಲಿ ದುಷ್ಟಚೇತನ ಜಾಗೃತವಾದಾಗ ಸಚ್ಚೇತನ ಸುಪ್ತವಾಗಿರುವುದು ಸಚ್ಚೇತನ ಎಚ್ಚರವಾದಾಗ ದುಷ್ಟಚೇತನ ಮರೆಯಾಗುವುದು. ಈ ಸುಚ್ಚೇತನವನ್ನು ಎಚ್ಚರದಲ್ಲಿಡುವ ಮೌಲ್ಯಯುತ ವರ್ತನೆಗಳು ಈ ರೀತಿಯಾಗಿ ಗುರುತಿಸಬಹುದು:
* ಜೀವನದಲ್ಲಿ ಪ್ರತಿ ವ್ಯಕ್ತಿಯನ್ನು ಗೌರವಿಸಿದರೆ ಗೌರವವೆನ್ನುವುದು ತಾನೇ ತಾನಾಗಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ.
* ಗೌರವ ಕೊಡುವುದು ನಮ್ಮ ಪ್ರಾಮಾಣಿಕ ಸ್ವಭಾವ ಆಗಬೇಕೇ ಹೊರತು ಅದು ತೋರಿಕೆಯ ಕಪಟವಾಗಬಾರದು.
* ನಮ್ಮ ನಡೆ-ನುಡಿಗಳು ನಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತವೆ. ಆದುದರಿಂದ ನಮ್ಮ ಮಾತಿನಲ್ಲಿ ವಿನಯತೆ ಇರಬೇಕು.
* ನಮಗಿಂತ ವಯಸ್ಸಿನಲ್ಲಿ ಕಿರಿಯವರಾದರೂ ಹೋಗಿ ಬನ್ನಿ ಎಂದು (ಬಹುವಚನ) ಮಾತನಾಡಿಸಿದರೆ ಕಿರಿಯರಿಗೆ ಹಿರಿಯರ ಮೇಲೆ ಗೌರವ ಹೆಚ್ಚುತ್ತದೆ.
* ಮಹಿಳೆಯರನ್ನು ಗೌರವಿಸುವುದು ಅತೀ ಮುಖ್ಯ.
* ಇತರರ ವಿಷಯದ ಮೇಲೆ ಅನಗತ್ಯ ತಲೆ ಹಾಕಬಾರದು. ಮತ್ತು ನಮಗೆ ಸಂಬಂಧಪಡದ ವ್ಯಕ್ತಿಗಳ ವಿಷಯದಲ್ಲಿ ಮೂಗು ತೂರಬಾರದು.
* ಇನ್ನೊಬ್ಬರ ಬಗ್ಗೆ ಕುಹಕದ ಮಾತುಗಳನ್ನಾಡಬಾರದು, ಯಾಕೆಂದರೆ ಅದು ನಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ.
* ಯಾವುದೇ ವ್ಯಕ್ತಿಯ ಬಗ್ಗೆ ಅವರ ಅನುಪಸ್ಥಿತಿಯಲ್ಲಿ ಮಾತನಾಡುವುದಕ್ಕಿಂತ, ನೇರವಾಗಿ ಅವರ ಉಪಸ್ಥಿತಿಯಲ್ಲಿಯೇ ಮಾಡಿದರೆ ಆ ವ್ಯಕ್ತಿ ಒಮ್ಮೆ ಸಿಡುಕಿದರೂ ಕೂಡಾ ತನ್ನನ್ನು ತಾನು ತಿದ್ದಿಕೊಳ್ಳಲು ಬಯಸುತ್ತಾನೆ/ಪ್ರಯತ್ನಿಸುತ್ತಾನೆ.
* ಬೇರೆಯವರ ಬಗ್ಗೆ ಅವರ ಚಾರಿತ್ರ್ಯದ ಬಗ್ಗೆ ಲಘುವಾಗಿ ಮಾತನಾಡಬಾರದು. ಮತ್ತು ಗಾಳಿ ಸುದ್ಧಿಯನ್ನು ಹಬ್ಬಿಸಬಾರದು.
* ಜನ ನಿಮ್ಮ ಬಗ್ಗೆ ಮಾತಾಡದಂತೆ ನಿಮ್ಮ ಚಾರಿತ್ರ್ಯವನ್ನು ನೀವೇ ರೂಪಿಸಿಕೊಳ್ಳಿ.
* ಬೇರೆಯವರ ಸೋಲನ್ನು ನೋಡಿ ಹೀಯಾಳಿಸಬೇಡಿರಿ. ಗೆಲುವು ಶಾಶ್ವತವಲ್ಲ. ಬೇರೆಯವರ ಇಂದಿನ ಸೋಲು ನಾಳೆಗೆ ನಿಮ್ಮದೇ ಆಗಬಹುದು.
ಇಳಿವಯಸ್ಸಿನವರ ಮೇಲೆ ಗೌರವ, ಕಾಳಜಿ, ಪ್ರೀತಿ ತೋರಿಸುವುದು ಅತೀ ಅಗತ್ಯ ನಾಳೆ ನಾವೂ ಇಳಿವಯಸ್ಸಿನವರಾಗಬಹುದು.
ಈ ಮೇಲಿನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಬದುಕು ಗೌರವಯುತವಾಗಿ ಸಾರ್ಥಕ್ಯದೆಡೆ ಸಾಗುವುದು. ಇಡಿಯ ವಿಶ್ವವೇ ಒಂದು ಕುಟುಂಬ ಎಂಬಂತೆ “ವಸುದೈವ ಕುಟುಂಬಕಂ” ಎಂಬ ಭವ್ಯ ಪರಂಪರೆ ಹೊಂದಿರುವ ಅದ್ಭುತವಾದ ಸಂಸ್ಕøತಿ ನಮ್ಮದು ಯಾವತ್ತೂ ನಾವು ಬದುಕಿಗೆ ಬೆನ್ನು ಹಾಕದೆ ನಿಂತು ಎದುರಿಸುವ ಧೈರ್ಯ-ಸ್ಥೈರ್ಯ ಮಕ್ಕಳ ಬದುಕಿಗೆ ಬರಬೇಕು ಮತ್ತು ಬದುಕಿಗೊಂದು ದಾರಿಯಿಲ್ಲವೆಂದು ಕುಗ್ಗಿ ಹೋಗುವುದರ ಬದಲು ಎದ್ದು ನಿಂತು ಛಲದಿಂದ ಬದುಕಲು ವಿದ್ಯೆಯಿಂದ ಸಾಧ್ಯ.
ಆದುದರಿಂದ ಈ ವಿದ್ಯೆಯ ಆತುರತೆ ನಮ್ಮ ಯುವಜನಾಂಗದಲ್ಲಿ ಬೆಳೆದು ವಿದ್ಯಾವಂತ, ಬುದ್ಧಿವಂತ, ಪ್ರಜ್ಞಾವಂತ, ನೀತಿವಂತ, ಧೈರ್ಯವಂತ ಸಮಾಜ ನಿರ್ಮಾಣವಾಗಲೆಂಬುದೇ ನಮ್ಮ ಆಶಯ.
Ever relevent subject. Well illustrated.